ರಾಜಸ್ಥಾನ : ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಭಾನುವಾರದಂದು ಉದಯಪುರ-ಅಸರ್ವಾ ರೈಲ್ವೆ ಹಳಿಯಲ್ಲಿ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಎಟಿಎಸ್ ಮತ್ತು ಎನ್‌ಐಎ ಅಧಿಕಾರಿಗಳ ತಂಡ ತನಿಖೆ ಕೈಗೆತ್ತಿಕೊಂಡಿದೆ.
ರಾಜಸ್ಥಾನ ಪೊಲೀಸರ ಪ್ರಕಾರ, ಟ್ರ್ಯಾಕ್ ಮೇಲೆ 3 ಕೆಜಿ ಡೈನಮೈಟ್ ಇಟ್ಟು ಸ್ಫೋಟ ನಡೆಸಲಾಗಿದೆ ಎಂದು ಹೇಳಿದ್ದಾರೆ. ಎಟಿಎಸ್ ಮತ್ತು ಎನ್‌ಐಎ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಅದಲ್ಲದೆ ಸ್ಪೋಟದ ಹಿಂದೆ ಭಯೋತ್ಪಾದಕ ಲಿಂಕ್ ಇರಬಹುದು, ಅದನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸ್ಫೋಟದಿಂದಾಗಿ ಟ್ರ್ಯಾಕ್‌ನಲ್ಲಿ ಬಿರುಕು ಉಂಟಾಗಿದೆ ಮತ್ತು ಅದರ ಪ್ಲೇಟ್‌ಗಳಿಗೂ ಹಾನಿಯಾಗಿದೆ. ಎಟಿಎಸ್, ಎನ್ ಐಎ, ಆರ್ ಪಿಎಫ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ರವಿವಾರ ಮುಂಜಾನೆ ರೈಲ್ವೆ ಹಳಿಯಲ್ಲಿ ಸ್ಪೋಟಗೊಂಡ ಸದ್ದು ಗ್ರಾಮಸ್ಥರಿಗೆ ಕೇಳಿದ್ದು ಗ್ರಾಮಸ್ಥರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮಾಹಿತಿ ಮೇರೆಗೆ ರೈಲ್ವೆ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಇದರೊಂದಿಗೆ ಉದಯಪುರ ವಿಭಾಗೀಯ ಆಯುಕ್ತ ರಾಜೇಂದ್ರ ಭಟ್, ಜಿಲ್ಲಾಧಿಕಾರಿ ತಾರಾಚಂದ್ ಮೀನಾ, ಎಸ್ಪಿ ವಿಕಾಸ್ ಕುಮಾರ್ ಶರ್ಮಾ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಹಮದಾಬಾದ್‌ನಿಂದ ಉದಯಪುರಕ್ಕೆ ಬರುತ್ತಿದ್ದ ರೈಲನ್ನು ಡುಂಗರ್‌ಪುರದಲ್ಲಿ ನಿಲ್ಲಿಸಲಾಯಿತು. ಸದ್ಯಕ್ಕೆ ಈ ಮಾರ್ಗದಲ್ಲಿ ಸಂಚರಿಸುವ ಎರಡೂ ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಇದನ್ನೂ ಓದಿ : ಇಸ್ತಾಂಬುಲ್ ಸ್ಫೋಟ ಪ್ರಕರಣ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, 81 ಮಂದಿಗೆ ಗಾಯ, ಓರ್ವನ ಬಂಧನ