ಉದಯಪುರ: ಜಿ20 ರಾಷ್ಟ್ರಗಳ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಂಡ ಬಳಿಕ ಮೊದಲ ಶೆರ್ಪಾಗಳ ಸಭೆ ರಾಜಸ್ಥಾನದ ಉದಯಪುರದಲ್ಲಿ ಭಾನುವಾರ ಶುರುವಾಗಿದೆ.
ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ನೇತೃತ್ವದಲ್ಲಿ 4 ದಿನಗಳ ಕಾಲ ಹಸಿರು ಅಭಿವೃದ್ಧಿ, ತಾಂತ್ರಿಕ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು, ಮಹಿಳೆಯರನ್ನು ಕೇಂದ್ರೀಕರಿಸಿದ ಅಭಿವೃದ್ಧಿ, ಸಹ್ಯ ಅಭಿವೃದ್ಧಿ ಆಧಾರಿತ ಬೆಳವಣಿಗೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಾಗುತ್ತದೆ. ಮುಂದಿನ ವರ್ಷ ನವದೆಹಲಿಯಲ್ಲಿ ನಡೆಯಲಿರುವ ಜಿ20 ರಾಷ್ಟ್ರಗಳ ಸಭೆಯಲ್ಲಿ ಅಂಗೀಕರಿಸಲಾಗುವ ನಿರ್ಣಯಗಳ ಬಗ್ಗೆಯೂ ಪರಾಮರ್ಶೆ ನಡೆಸಲಾಗುತ್ತದೆ.
ಬಾಂಗ್ಲಾದೇಶ, ಈಜಿಪ್ಟ್, ಮಾರಿಷಿಯಸ್, ನೆದರ್ಲೆಂಡ್, ನೈಜೀರಿಯಾ, ಒಮಾನ್, ಸಿಂಗಾಪುರ, ಸ್ಪೈನ್, ಯುಎಇ ಸರ್ಕಾರಗಳಿಗೆ ನಾಲ್ಕು ದಿನಗಳ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.
ಸ್ನೇಹಿತನಲ್ಲಿ ನಂಬಿಕೆ ಇದೆ:
Related Articles
ಒಕ್ಕೂಟಕ್ಕೆ ಭಾರತದ ಅಧ್ಯಕ್ಷತೆ ಶುರುವಾಗುತ್ತಲೇ ಟ್ವೀಟ್ ಮಾಡಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವಲ್ ಮ್ಯಾಕ್ರನ್ “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ನೆಲೆಯಲ್ಲಿ ಜಿ20 ರಾಷ್ಟ್ರದ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಂಡಿದೆ. ಸ್ನೇಹಿತ ನರೇಂದ್ರ ಮೋದಿ ನಮ್ಮೆಲ್ಲರನ್ನೂ ಈ ಧ್ಯೇಯ ವಾಕ್ಯದ ಅಡಿಯಲ್ಲಿ ಒಗ್ಗೂಡಿಸಿ ಶಾಂತಿಯುತ ಹಾಗೂ ಸಹ್ಯ ಅಭಿವೃದ್ಧಿ ಇರುವ ಜಗತ್ತು ನಿರ್ಮಾಣ ಮಾಡುವಲ್ಲಿ ಅತ್ಯುತ್ತಮ ಕೊಡುಗೆ ನೀಡುವರೆಂಬ ನಂಬಿಕೆ ನನಗೆ ಇದೆ’ ಎಂದು ಬರೆದುಕೊಂಡಿದ್ದಾರೆ.
ಇಂದು ಸರ್ವ ಪಕ್ಷ ಸಭೆ:
ಜಿ20 ಶೃಂಗದ ಕುರಿತು ಚರ್ಚಿಸಲೆಂದು ಕೇಂದ್ರ ಸರ್ಕಾರ ಸೋಮವಾರ ಸರ್ವ ಪಕ್ಷಗಳ ಸಭೆ ಕರೆದಿದೆ. ಮುಂದಿನ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ20 ರಾಷ್ಟ್ರ ಶೃಂಗ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿ ಅನುಮೋದನೆ ಪಡೆಯುವ ಬಗ್ಗೆ ಚರ್ಚಿಸಲಾಗುತ್ತದೆ. 40 ರಾಜಕೀಯ ಪಕ್ಷಗಳ ಅಧ್ಯಕ್ಷರಿಗೆ ಈಗಾಗಲೇ ಸಭೆಯ ಆಹ್ವಾನ ಕಳುಹಿಸಿಕೊಡಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.