ನವದೆಹಲಿ: ಬಿಜೆಪಿಯಿಂದ ಅಮಾನತುಗೊಂಡಿದ್ದ ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಮೆಡಿಕಲ್ ಶಾಪ್ ನ ಮಾಲೀಕರನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಶಾಲೆಗಳ ಅವ್ಯವಸ್ಥೆ: ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ ಎಚ್ ಡಿಕೆ
ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ನನ್ನು ಬರ್ಬರವಾಗಿ ಹತ್ಯೆಗೈಯುವ ಒಂದು ತಿಂಗಳ ಮೊದಲು ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಜೂನ್ 21ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಔಷಧ ವ್ಯಾಪಾರಿ ಉಮೇಶ್ ಪ್ರಹ್ಲಾದ್ ರಾವ್ ಕೊಲ್ಲೆಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.
ಪ್ರತೀಕಾರಕ್ಕಾಗಿ ಮಾಡಿರುವ ಪ್ರಹ್ಲಾದ್ ರಾವ್ ಹತ್ಯೆ ಖಂಡಿಸಿ ಸ್ಥಳೀಯ ಬಿಜೆಪಿ ಮುಖಂಡರು ಪೊಲೀಸರಿಗೆ ದೂರು ನೀಡಿದ್ದರು. ಬಿಜೆಪಿಯಿಂದ ದೂರು ಸ್ವೀಕರಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿ ಕೆಲವು ಪೋಸ್ಟ್ ಗಳನ್ನು ಪ್ರಹ್ಲಾದ್ ರಾವ್ ವಾಟ್ಸಪ್ ಗ್ರೂಪ್ ಗಳಿಗೆ ಶೇರ್ ಮಾಡಿದ್ದರು. ಈ ವಾಟ್ಸಪ್ ಗ್ರೂಪ್ ನಲ್ಲಿ ಕೆಲವು ಮುಸ್ಲಿಮ್ ಸದಸ್ಯರಿದ್ದು, ಪ್ರಹ್ಲಾದ್ ರಾವ್ ಆಕಸ್ಮಿಕವಾಗಿ ಈ ಪೋಸ್ಟ್ ಫಾರ್ವರ್ಡ್ ಮಾಡಿರುವುದಾಗಿ ಕೋಟ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಪಿಟಿಐಗೆ ತಿಳಿಸಿರುವುದಾಗಿ ವರದಿಯಾಗಿದೆ.