ಕಾಪು: ದ.ಕ.ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆಯುವ ಉಚ್ಚಿಲ ದಸರಾ ಉತ್ಸವ-2023ಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿಯವರು ಭಾನುವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಾಡಿಗೆ ಸುಖ ಸಂಪತ್ತು ದೊರಕಬೇಕು. ದಸರಾದ ಮೂಲಕ ನಾಡಿಗೆ, ಸುಖ, ಸಂಪತ್ತು, ಮಳೆ, ಬೆಳೆ, ಜನರ ಜೀವನ ಸುಖಕರವಾಗಲಿ. ಬದುಲು ಹಸನಾಗಲಿ. ಒಂಭತ್ತು ದಿನಗಳ ಕಾಲ ನಡೆಯುವ ಉಚ್ಚಿಲ ದಸರಾ ಉಡುಪಿ ಜನತೆಗೆ ಸಂಭ್ರಮದ ಹಬ್ಬವಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಗೌರವ ಸಲಹೆಗಾರ ಡಾ| ಜಿ. ಶಂಕರ್ ಮಾತನಾಡಿ, ಉಚ್ಚಿಲ ದಸರಾ ಸಂಭ್ರಮವನ್ನು ಯುವ ದಸರಾ ಮತ್ತು ಮಹಿಳಾ ದಸರಾದ ರೂಪದಲ್ಲೂ ಆಯೋಜಿಸುವ ಅವಕಾಶ ದೊರಕಿದೆ. ಸಾಂಸ್ಕೃತಿಕ ವೈಭವದೊಂದಿಗೆ ಈ ಬಾರಿ ಫಲಪುಷ್ಪ ಪ್ರದರ್ಶನ, ಮೀನುಗಾರಿಕಾ ಪರಿಕರಗಳ ಪ್ರದರ್ಶನ, ಪುಸ್ತಕ ಮೇಳವನ್ನೂ ಆಯೋಜಿಸಲಾಗಿದ್ದು ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ರಾಜ್ಯ ಸರಕಾರ 50 ಲಕ್ಷ ರೂ. ಅನುದಾನ ನೀಡಿದ್ದು, ಭವಿಷ್ಯದಲ್ಲಿ ಇನ್ನಷ್ಟು ವಿಜೃಂಭಣೆಯೊಂದಿಗೆ ನಡೆಸಲು ಉತ್ತೇಜನ ನೀಡಿದಂತಾಗಿದೆ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶುಭಹಾರೈಸಿದರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮೊಗವೀರ ಸಮಾಜದ ಮುಂದಾಳು ಡಾ.ಜಿ.ಶಂಕರ್, ಎಸಿ ರಶ್ಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಪಾಧ್ಯಕ್ಷ ಸುಭಾಷ್ಚಂದ್ರ ಮೆಂಡನ್, ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್, ಉದ್ಯಮಿ ಭುವನೇಂದ್ರ ಕಿದಿಯೂರು, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ.ಅಮೀನ್, ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ರಾಣಿ, ಸುಗುಣ, ವಿವಿಧ ಪದಾಧಿಕಾರಿಗಳಾದ ಮನೋಜ್ ಕಾಂಚನ್, ಸುಗುಣ ಕರ್ಕೇರ, ಶಂಕರ ಸಾಲ್ಯಾನ್, ಸತೀಶ್ ಅಮೀನ್ ಬಾರ್ಕೂರು, ಮೋಹನ್ ಬೇಂಗ್ರೆ, ಅನಿಲ್ ಕುಮಾರ್, ಸಂಜೀವ ಮೆಂಡನ್, ದಿನೇಶ್, ರವೀಂದ್ರ ಶ್ರೀಯಾನ್, ಸತೀಶ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.
ದೇವಸ್ಥಾನದ ಪಕ್ಕದಲ್ಲಿರುವ ಸುಸಜ್ಜಿತ ಶ್ರೀಮತಿ ಶಾಲಿನಿ ಡಾ.ಜಿ. ಶಂಕರ್ ಸಭಾಂಗಣದಲ್ಲಿ ನವದುರ್ಗೆಯರ ಮತ್ತು ಶ್ರೀ ಶಾರದ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಬೆಳ್ಳಿ ಕಿರೀಟ, ಚಿನ್ನದ ಬೂತಾಯಿ ಮೀನಿನ ಸರ, ಬೆಳ್ಳಿ ತಂಬೂರಿ ಸಮರ್ಪಿಸಲಾಯಿತು.
ಫಲಪುಷ್ಪ ಪ್ರದರ್ಶನ, ಪುಸ್ತಕ ಮೇಳ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನಗಳು, ಅಮ್ಯೂಸ್ ಮೆಂಟ್ ಪಾರ್ಕ್ ಗಮನಸೆಳೆಯಿತು.
ಚಂಡಿಕಾಹೋಮ, ಅನ್ನಸಂತರ್ಪಣೆ, ಭಜನಾ ಮಂಡಳಿಯವರಿಂದ ಭಜನೆ, ವರೆಗೆ ಸಹಸ್ರ ಸುಮಂಗಲೆಯವರಿಂದ ಸಾಮೂಹಿಕ ಕುಂಕುಮಾರ್ಚನೆ, ಧಾರ್ಮಿಕ ಸಭಾ ಕಾರ್ಯಕ್ರಮ, ವಿವಿಧ ಮನೋರಂಜನಾ ಕಾರ್ಯಕ್ರಮ, ಪ್ರತೀದಿನ ನವದುರ್ಗೆಯರು ಮತ್ತು ಶ್ರೀ ಶಾರದಾದೇವಿಗೆ ತ್ರಿಕಾಲಪೂಜೆಗೆ ಚಾಲನೆ ನೀಡಲಾಯಿತು.