Advertisement
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಉಪ್ಪಳದಿಂದ ಶೀರೂರು ಗಡಿಭಾಗದ ವರೆಗೆ ಮೊಗವೀರರ ಕುಲದೇವತೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ “ಶ್ರೀಮತಿ ಶಾಲಿನಿ ಡಾ| ಜಿ. ಶಂಕರ್ ತೆರೆದ ಸಭಾಂಗಣ’ದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರಕಲಿದೆ. 10 ದಿನಗಳ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ದಸರಾ ವೈಭವ ಉದ್ಘಾಟನೆ
ಡಾ| ಜಿ. ಶಂಕರ್ ಅವರು ಮೊಗವೀರ ಸಮಾಜಕ್ಕೆ ನೀಡಿರುವ ಅಪಾರ ಕೊಡುಗೆಗಳಿಗೆ ಗೌರವ ಸೂಚಿಸುವ ಸಲುವಾಗಿ ದ.ಕ. ಮೊಗವೀರ ಮಹಾಜನ ಸಂಘದ ವತಿಯಿಂದ ನಿರ್ಮಿಸಲಾದ ಶ್ರೀಮತಿ ಶಾಲಿನಿ ಡಾ| ಜಿ. ಶಂಕರ್ ತೆರೆದ ಸಭಾಂಗಣವನ್ನು ಸೆ. 26ರಂದು ಬೆಳಗ್ಗೆ 9.05ಕ್ಕೆ ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್ ದಂಪತಿ ಲೋಕಾರ್ಪಣೆೆಗೊಳಿಸಲಿದ್ದಾರೆ. 9.30ಕ್ಕೆ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ದಸರಾ ಉತ್ಸವಕ್ಕೆ ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ| ಶ್ರೀತೇಜ ಕೂರ್ಮಾ ರಾವ್ ಚಾಲನೆ ನೀಡಲಿದ್ದಾರೆ. ಸೆ. 26ರಿಂದ ಅ. 5ರ ವರೆಗೆ ಪ್ರತೀ ದಿನ ಚಂಡಿಕಾ ಹೋಮ, ಮಧ್ಯಾಹ್ನ ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಭಜನ ಕಾರ್ಯಕ್ರಮ, ಸಂಜೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಶ್ರೀ ದುರ್ಗಾ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಪ್ರತೀ ದಿನ ಸಂಜೆ 6ರಿಂದ ಗಂಟೆ 8ರ ವರೆಗೆ ನೃತ್ಯ ಭಾರತಿ ಕದ್ರಿ ಮಂಗಳೂರು ಅವರಿಂದ ಭರತನಾಟ್ಯ, ಜಾನಪದ ನೃತ್ಯ ಹಾಗೂ ವಿವಿಧ ನೃತ್ಯ ಸಹಿತ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮಗಳು ನಡೆಯಲಿವೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್, ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಆಧ್ಯಕ್ಷ ಗುಂಡು ಅಮೀನ್ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.