ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೆ. 26ರಿಂದ ಅ. 5ರ ವರೆಗೆ ಜರಗಲಿರುವ ಉಚ್ಚಿಲ ದಸರಾ – 2022 ವೈಭವಕ್ಕೆ ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ| ಶ್ರೀತೇಜ ಕೂರ್ಮಾ ರಾವ್ ಸೋಮವಾರ ಚಾಲನೆ ನೀಡಿದರು.
ದ.ಕ. ಮೊಗವೀರ ಮಹಾಜನ ಸಂಘದ ವತಿಯಿಂದ 1.70 ಕೋ. ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ “ಶ್ರೀಮತಿ ಶಾಲಿನಿ ಡಾ| ಜಿ. ಶಂಕರ್ ತೆರೆದ ಸಭಾಂಗಣ’ವನ್ನು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್ ಉದ್ಘಾಟಿಸಿದರು.
ಮೈಸೂರು, ಮಡಿಕೇರಿ, ಮಂಗಳೂರು ಮಾದರಿಯಲ್ಲಿ ಉಚ್ಚಿಲದಲ್ಲಿ ಈ ಬಾರಿ ಪ್ರಥಮ ಬಾರಿಗೆ ದಸರಾ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಡಾ| ಜಿ. ಶಂಕರ್ ತಿಳಿಸಿದರು.
ತೆರೆದ ಸಭಾಂಗಣದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆಗೈಯಲಾಗಿದ್ದು ಶಾರದಾ ಮಾತೆ ಮತ್ತು ನವದುರ್ಗೆ ಯರ ವಿಗ್ರಹಕ್ಕೆ ಏಕಕಾಲದಲ್ಲಿ ಮಂಗಳರಾತಿ ಬೆಳಗುವ ಮೂಲಕ ದಸರಾ ವೈಭವಕ್ಕೆ ಚಾಲನೆ ನೀಡಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ಜರಗಿದವು.
ಶಾಸಕ ಲಾಲಾಜಿ ಆರ್. ಮೆಂಡನ್, ಎಡಿಸಿ ವೀಣಾ ಕುಮಾರಿ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ದ.ಕ. ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿ ಸಾಲ್ಯಾನ್, ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಗಣ್ಯರಾದ ಸುಧಾಕರ ಕುಂದರ್, ಭರತ್ ಕುಮಾರ್ ಎರ್ಮಾಳು, ಹರಿಯಪ್ಪ ಕೋಟ್ಯಾನ್, ರಾಜೇಂದ್ರ ಸುವರ್ಣ, ಮೋಹನ್ ಬೆಂಗ್ರೆ, ವಿನಯ ಕರ್ಕೇರ, ವೈ. ಗಂಗಾಧರ ಸುವರ್ಣ, ಶಿಲ್ಪಾ ಗಂಗಾಧರ ಸುವರ್ಣ ಉಪಸ್ಥಿತರಿದ್ದರು.
ಉಚ್ಚಿಲ ದೇವಸ್ಥಾನದ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
- ಉಡುಪಿ ಜಿಲ್ಲೆಯ ಪ್ರಥಮ ದಸರಾ ಮಹೋತ್ಸವಕ್ಕೆ ಉತ್ತಮ ಸ್ಪಂದನೆ; ಮೊದಲ ದಿನವೇ 50 ಸಾವಿರಕ್ಕೂ ಅಧಿಕ ಮಂದಿ ಭಾಗಿ
- 10 ಸಾವಿರಕ್ಕೂ ಅಧಿಕ ಮಂದಿಯಿಂದ ಅನ್ನಪ್ರಸಾದ ಸ್ವೀಕಾರ