ಆರುಸ್ (ಡೆನ್ಮಾರ್ಕ್): ಭಾರತದ ವನಿತಾ ತಂಡ “ಉಬೆರ್ ಕಪ್’ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟ್‌ರ್ ಫೈನಲ್‌ನಲ್ಲಿ ಜಪಾನ್‌ಗೆ ಸೋತು ಕೂಟದಿಂದ ಹೊರಬಿದ್ದಿದೆ.
ಅಗ್ರ ಶ್ರೇಯಾಂಕದ ಆಟಗಾರ್ತಿಯರಾದ ಪಿ.ವಿ. ಸಿಂಧು, ಸೈನಾ ನೆಹ್ವಾಲ್ ಮೊದಲಾದವರ ಗೈರಿನಿಂದಾಗಿ ಭಾರತ ತಂಡ ಸಾಕಷ್ಟು ದುರ್ಬಲಗೊಂಡಿತ್ತು. ಹೀಗಾಗಿ ಬಲಿಷ್ಠ ಜಪಾನ್ ವಿರುದ್ಧದ “ಬೆಸ್ಟ್ ಆಫ್ ಫೈವ್’ ಹಣಾಹಣಿಯ ಮೊದಲ ಮೂರೂ ಪಂದ್ಯಗಳಲ್ಲಿ ಸೋಲು ಕಾಣಬೇಕಾಯಿತು.
ವಿಶ್ವದ 5ನೇ ಶ್ರೇಯಾಂಕದ ಅಕಾನೆ ಯಮಾಗುಚಿ 21-12, 21-17 ಅಂತರದಿಂದ ಮಾಳವಿಕಾ ಬನ್ಸೋಡ್ ಅವರನ್ನು ಮಣಿಸಿ ಜಪಾನಿಗೆ 1-0 ಮುನ್ನಡೆ ಒದಗಿಸಿದರು. ಡಬಲ್ಸ್‌ನಲ್ಲಿ ತನಿಷಾ ಕಾಸ್ಟೊì-ಋತುಪರ್ಣಾ ಪಂಡಾ ಅವರನ್ನು ಯುಕಿ ಫುಕುಶಿಮಾ-ಮಾಯು ಮಾತ್ಸುಮೊಟೊ 21-8, 21-10 ಅಂತರದಿಂದ ಹಿಮ್ಮೆಟ್ಟಿಸಿದರು. ಮರು ಸಿಂಗಲ್ಸ್‌ನಲ್ಲಿ ಅದಿತಿ ಭಟ್ ಕೂಡ ಎಡವಿದರು. ಅವರನ್ನು ಸಯಾಕಾ ಟಕಹಾಶಿ 21-16, 21-7 ಅಂಕಗಳಿಂದ ಪರಾಭವಗೊಳಿಸಿದರು.
ಇದನ್ನೂ ಓದಿ:ಸೂಪರ್ ಚೆನ್ನೈಗೆ 4ನೇ ಐಪಿಎಲ್ ಕಿರೀಟ
ಪುರುಷರಿಗೆ ಸೋಲು ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಭಾರತದ ಪುರುಷರ ತಂಡ “ಥಾಮಸ್ ಕಪ್’ ಬ್ಯಾಡ್ಮಿಂಟನ್ ಕೂಟದ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ಚೀನ ವಿರುದ್ಧ 1-4 ಅಂತರದಿಂದ ಪರಾಭವಗೊಂಡಿತು. ಈ ಮುಖಾಮುಖೀಯಲ್ಲಿ ಜಯಿಸಿದ್ದು ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಜೋಡಿ ಮಾತ್ರ. ಇವರು ಹೆ ಜಿ ಟಿಂಗ್-ಜೂ ಹಾವೊ ಡಾಂಗ್ ವಿರುದ್ಧ 21-14, 21-14 ಅಂತರದ ಮೇಲುಗೈ ಸಾಧಿಸಿದರು.
ಗ್ರೂಪ್‌ನಲ್ಲಿ ದ್ವಿತೀಯ ಸ್ಥಾನಿಯಾದ ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್ ವಿರುದ್ಧ ಸೆಣಸಲಿದೆ.