ಹೊಸದಿಲ್ಲಿ : ಈ ಬಾರಿಯ 2017ರ ಗಣರಾಜ್ಯೋತ್ಸವ ದಿನದ ಕಾರ್ಯಕ್ರಮದಲ್ಲಿ ಅಬುಧಾಬಿಯ ಪಟ್ಟಾಭಿಷಿಕ್ತ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್‌ಯಾನ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಇದೇ ಪ್ರಥಮ ಬಾರಿಗೆ ಅರಬ್ ಸೈನಿಕರು ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಥಸಂಚಲನ ನಡೆಸಲಿದ್ದಾರೆ.
ರಾಜಕುಮಾರ ಶೇಖ್ ಮೊಹಮ್ಮದ್ ಅವರು ತಮ್ಮೊಂದಿಗೆ ಯುಎಇಯ ರಕ್ಷಣಾ ಪಡೆಯಿಂದ ಮಾರ್ಚಿಂಗ್ ಬ್ಯಾಂಡ್ ತರಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಈ ಹಿಂದೆ, 2016ರ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ಮುಖ್ಯ ಅತಿಥಿಗಳಾಗಿ ಬಂದಿದ್ದಾಗ ಅವರ ಜತೆಗೆ ಫ್ರೆಂಚ್ ಮಾರ್ಚಿಂಗ್ ಬ್ಯಾಂಡ್ ಬಂದಿತ್ತು.
ಯುಎಇಯ ಡೆಪ್ಯುಟಿ ಸುಪ್ರೀಂ ಕಮಾಂಡರ್ ಆಗಿರುವ ಅಲ್ ನಹ್‌ಯಾನ್ ಅವರ ಭೇಟಿಯಿಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಕ್ಕೆ, ವಿಶೇಷವಾಗಿ ವ್ಯಾಪಾರ-ವಾಣಿಜ್ಯ ಮತ್ತು ಭದ್ರತೆಗೆ ಸಂಬಂಧಿಸಿದಂತೆ, ವಿಶೇಷ ಉತ್ತೇಜನ ಸಿಗಲಿದೆ ಎಂಬ ನಿರೀಕ್ಷೆ ಇದೆ.
ಯುಎಇಯಲ್ಲಿ 26 ಲಕ್ಷಕ್ಕೂ ಅಧಿಕ ಭಾರತೀಯರಿದ್ದಾರೆ. ವರ್ಷಂಪ್ರತಿ ಅವರಿಂದ ಭಾರತಕ್ಕೆ ಸುಮಾರು 14 ಶತಕೋಟಿ ಡಾಲರ್ ರವಾನೆಯಾಗುತ್ತಿದೆ.