ದುಬೈ: ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ನಿರ್ಮಿಸಲಾಗಿರುವ ದೇಗುಲ ಲೋಕಾರ್ಪಣೆಗೊಳ್ಳುವುದಕ್ಕೂ ಮೊದಲೇ ದೇಗುಲಕ್ಕೆ ಅಧಿಕ ಪ್ರಮಾಣದಲ್ಲಿ ಜನರು ಬರಲಾರಂಭಿಸಿದ್ದಾರೆ.
ಆರಾಧನೆಯ ಗ್ರಾಮ ಎಂದೇ ಕರೆಸಿಕೊಳ್ಳುವ ಜೆಬೆಲ್ ಅಲಿಯಲ್ಲಿ ನಿರ್ಮಾಣವಾಗಿರುವ ದೇಗುಲವು ದಸರಾ ದಿನವಾದ ಅ.5ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದ್ದು, ಸೆ.1ರಿಂದಲೇ ಜನರಿಗೆ ಪ್ರವೇಶಕ್ಕೆ ಅನುಮತಿ ಕೊಡಲಾಗಿದೆ.
ಕ್ಯೂಆರ್ ಕೋಡ್ ಮೂಲಕ ದೇಗುಲದ ಭೇಟಿಗೆ ಮುಂಗಡ ಬುಕಿಂಗ್ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಅಕ್ಟೋಬರ್ ಅಂತ್ಯದವರೆಗೂ ಬುಕಿಂಗ್ ಆಗಿದೆಯೆಂದು ದೇವಸ್ಥಾನದ ಆಡಳಿತ ತಿಳಿಸಿದೆ.
ದೇಗುಲದ ಆವರಣದಲ್ಲಿ 16 ದೇವತೆಗಳ ಮೂರ್ತಿಯಿದ್ದು, ಸದ್ಯ ದಿನಕ್ಕೆ ಮೂರು ಬಾರಿ ಮಂತ್ರ ಪಠಣೆಯಾಗುತ್ತಿದೆ. ಭಾರತ ಮೂಲದ 14 ಪಂಡಿತರು ಮಂತ್ರ ಪಠಣೆ ಜವಾಬ್ದಾರಿ ಹೊತ್ತಿದ್ದು, ಅದರಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೂ ಅವಕಾಶವಿದೆ.
ದೇಗುಲದಲ್ಲಿ ಬೆಳಗ್ಗೆ 6.30ರಿಂದ ರಾತ್ರಿ 8 ಗಂಟೆಯವರೆಗೆ ದರ್ಶನವಿದೆ.ಇದೇ ಪ್ರದೇಶದಲ್ಲಿ ಗುರು ನಾನಕ್ ದರ್ಬಾರ್ ಗುರುದ್ವಾರ ಹಾಗೂ ಹಲವು ಚರ್ಚ್‌ಗಳು ಇವೆ.