ಯುಎಇ: ತೈಲ-ಸಮೃದ್ಧ ಅಬುಧಾಬಿ, ಹೊಳೆಯುವ ಆಕರ್ಷಕ ಕಟ್ಟಡಗಳ ತವರು ದುಬೈ. ಯುನೈಟೆಡ್ ಅರಬ್ ಎಮಿರೇಟ್ಸ್ ನ ಈ ದಾಖಲೆಗಳ ಪಟ್ಟಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
“ಆರ್ಟನ್ ಕ್ಯಾಪಿಟಲ್” ಪ್ರಕಟಿಸಿದ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಅದು ಯುರೋಪಿಯನ್ ರಾಷ್ಟ್ರಗಳ ಪ್ರಾಬಲ್ಯ ಹೊಂದಿರುವ ಟಾಪ್-ಟೆನ್ ಪಾಸ್ ಪೋರ್ಟ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಯುಎಇ ಪಾಸ್‌ಪೋರ್ಟ್‌ನೊಂದಿಗೆ ಪ್ರಯಾಣಿಕರು 180 ದೇಶಗಳಿಗೆ ಯಾವುದೇ ಅಡೆತಡೆಗಳಿಲ್ಲದೆ ಮುಕ್ತವಾಗಿ ಪ್ರವೇಶಿಸಬಹುದು.
ಜರ್ಮನಿ ಮತ್ತು ಸ್ವೀಡನ್‌ನಂತಹ ಏಳು ಯುರೋಪಿಯನ್ ದೇಶಗಳು ಹಾಗು ಜಪಾನ್ ಸೇರಿದಂತೆ ಇತರ ಒಂಬತ್ತು ದೇಶಗಳು “ಆರ್ಟನ್ ಕ್ಯಾಪಿಟಲ್” ಪ್ರಕಟಿಸಿದ ಪಟ್ಟಿಯಲ್ಲಿ ವಿಶ್ವದ ಅತ್ಯುತ್ತಮ ಪಾಸ್ ಪೊರ್ಟ್ ಹೊಂದಿರುವ ದೇಶಗಳ ಸ್ಥಾನ ಪಡೆದಿವೆ. ಆದರೆ, ಏಷ್ಯಾದ ದೇಶಗಳ ಪಾಸ್ ಪೋರ್ಟ್ ಗಳಿಂದ 171 ದೇಶಗಳಿಗೆ ಸುಲಭ ಪ್ರವೇಶ ಪಡೆಯಲು ಸಾಧ್ಯವಿದೆ ಮತ್ತು ಆರ್ಟನ್‌ನ ಸೂಚ್ಯಂಕದಲ್ಲಿ 24 ನೇ ಸ್ಥಾನವನ್ನು ಪಡೆದುಕೊಂಡಿವೆ. ವಿಶ್ವದ ಅತಿ ಎತ್ತರದ ಕಟ್ಟಡ, ಆಳವಾದ ಈಜುಕೊಳ ಮತ್ತು ಅತಿ ಎತ್ತರದ ಹೋಟೆಲ್‌ಗಳನ್ನು ಒಳಗೊಂಡಿರುವ ಯುಎಇ (UAE)ಯ ಹೆಚ್ಚುತ್ತಿರುವ ಪುರಸ್ಕಾರಗಳ ಪಟ್ಟಿಗೆ ವಿಶ್ವದ ಪ್ರಬಲ ಪಾಸ್‌ಪೋರ್ಟ್ ಹೊಂದಿರುವ ದೇಶವೆಂಬ ಹೆಗ್ಗಳಿಕೆಯೂ ಸೇರಿಕೊಂಡಿದೆ.
ಯುರೋಪಿಯನ್ ಯೂನಿಯನ್‌ನೊಂದಿಗಿನ ವೀಸಾ ಯೋಜನೆಗಳನ್ನು ಅಮಾನತುಗೊಳಿಸಿರುವ ಕಾರಣ, ಪ್ರವೇಶ ಸ್ಕೋರ್ ಕುಸಿತವನ್ನು ಕಂಡ ಏಕೈಕ ದೇಶವೆಂದರೆ ವನವಾಟು (Vanuatu). ಅಫ್ಘಾನಿಸ್ಥಾನದ ಪಾಸ್‌ಪೋರ್ಟ್ ಕೂಡ ಅತೀ ಕಡಿಮೆ ಶ್ರೇಯಾಂಕವನ್ನು ಪಡೆದಿದ್ದು, ಕನಿಷ್ಠ ಉಪಯುಕ್ತವಾಗಿದೆ ಎಂದು ವರದಿ ತಿಳಿಸಿದೆ.