ಅಬುಧಾಬಿ : ಜಡಿಮಳೆ, ಪ್ರವಾಹ, ಭೂಕುಸಿತವೇ ಮೊದಲಾದ ಭೀಕರ ನೈಸರ್ಗಿಕ ಪ್ರಕೋಪಕ್ಕೆ ನಲುಗಿಹೋಗಿರುವ ಕೇರಳಕ್ಕೆ ”ಯಾವುದೇ ನಿರ್ದಿಷ್ಟ ಮೊತ್ತದ ಹಣಕಾಸು ನೆರವು ನೀಡುವ ಅಧಿಕೃತ ಘೋಷಣೆಯನ್ನು ತಾನು ಮಾಡೇ ಇಲ್ಲ” ಎಂದು ಯುಎಇ ಸರಕಾರ ಸ್ಪಷ್ಟಪಡಿಸಿದೆ.
ಯುಎಇ ಆರ್ಥಿಕ ನೆರವು ಸ್ವೀಕರಿಸುವ ವಿಷಯದಲ್ಲಿ ಕೇಂದ್ರ ಮತ್ತು ಕೇರಳ ಸರಕಾರ ನಡುವಿನ ಹಗ್ಗಜಗ್ಗಾಟಕ್ಕೆ ತಾನು ಸಿಲುಕಿಕೊಂಡಿರುವುದನ್ನು ಗಮನಿಸಿರುವ ಯುಎಇ ಸರಕಾರ ಈ ಅಧಿಕೃತ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
”ಕೇರಳಕ್ಕೆ ಯಾವುದೇ ನಿರ್ದಿಷ್ಟ ಮೊತ್ತದ ಹಣಕಾಸು ನೆರವು ನೀಡುವ ಬಗ್ಗೆ ಯುಎಇ ಈ ತನಕ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ” ಎಂದು ಯುಎಇ ರಾಯಭಾರಿ ಅಹ್ಮದ್ ಅಲ್‌ಬನ್ನಾ ಹೇಳಿರುವುದನ್ನು ಉಲ್ಲೇಖೀಸಿ “ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ನಿನ್ನೆ ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು “ಯುಎಇ ಸರಕಾರ ಕೇರಳಕ್ಕೆ 700 ಕೋಟಿ ರೂ. ಹಣಕಾಸು ನೆರವು ನೀಡುವುದಾಗಿ ಹೇಳಿದೆ’ ಎಂದು ತಿಳಿಸಿದ್ದರು.
ಮಾತ್ರವಲ್ಲದೆ ಅಬುಧಾಭಿಯ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೋನ್ ಕರೆ ಮಾಡಿ ಯುಎಇ ನೆರವು ಕೊಡುಗೆಯನ್ನು ತಿಳಿಸಿದ್ದಾರೆ ಎಂದೂ ಪಿಣರಾಯಿ ಹೇಳಿದ್ದರು