Advertisement
ಮಧ್ಯಮ ವೇಗಿಗಳಾದ ರಾಜ್ ಬಾವಾ ಮತ್ತು ರವಿಕುಮಾರ್ ಘಾತಕ ಬೌಲಿಂಗ್ ಮೂಲಕ ಆಂಗ್ಲರನ್ನು ಆರಂಭದಲ್ಲೇ ಕಟ್ಟಿಹಾಕುವಲ್ಲೇನೋ ಯಶಸ್ವಿಯಾದರು, ಆದರೆ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್ ಜೇಮ್ಸ್ ರೆವ್ ಕ್ರೀಸ್ ಆಕ್ರಮಿಸಿಕೊಂಡು ತಂಡವನ್ನು ಮೇಲೆತ್ತಿದರು.ಜೇಮ್ಸ್ ರೆವ್ ಅವರದು ದಿಟ್ಟ ಹೋರಾಟವಾಗಿತ್ತು. 4ನೇ ಓವರ್‌ನಲ್ಲಿ ಬ್ಯಾಟ್ ಹಿಡಿದು ಬಂದ ಅವರು ಎಚ್ಚರಿಕೆ ಹಾಗೂ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಇಂಗ್ಲೆಂಡಿಗೆ ಆಸರೆಯಾದರು.
Related Articles
ಪ್ರತೀ ಪಂದ್ಯದಲ್ಲೂ ಅರ್ಲಿ ಬ್ರೇಕ್ ಒದಗಿಸುವ ಎಡಗೈ ಪೇಸ್ ಬೌಲರ್ ರವಿಕುಮಾರ್ ಇಲ್ಲಿ ತಮ್ಮ ಮೊದಲ ಓವರ್‌ನಲ್ಲೇ ಮ್ಯಾಜಿಕ್ ಮಾಡಿದರು. ಜೇಕಬ್ ಬೆಥೆಲ್ (2) ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಮುಂದಿನ ಓವರ್‌ನಲ್ಲಿ ರವಿಕುಮಾರ್ ಅವರದು ಇನ್ನೊಂದು ದೊಡ್ಡ ಬೇಟೆ. ಖಾತೆಯನ್ನೇ ತೆರೆಯದ ನಾಯಕ ಟಾಮ್ ಬ್ರೆಸ್ಟ್ ಕ್ಲೀನ್ ಬೌಲ್ಡ್ ಆಗಿ ಮರಳಿದರು. ಇದು ಪ್ರಸಕ್ತ ಕೂಟದಲ್ಲಿ ಇಂಗ್ಲೆಂಡ್ ಕಡೆಯಿಂದ ದಾಖಲಾದ ಮೊದಲ “ಡಕ್’.
Advertisement
ಈ ನಡುವೆ ಆರಂಭಕಾರ ಜಾರ್ಜ್ ಥಾಮಸ್ ಕೆಲವು ಆಕರ್ಷಕ ಹೊಡೆತಗಳ ಮೂಲಕ ತಂಡದ ಇನ್ನಿಂಗ್ಸ್ ಬೆಳೆಸಲು ಪ್ರಯತ್ನಿಸುತ್ತಿದ್ದರು. ಥಾಮಸ್ ಗಳಿಕೆ 30 ಎಸೆತಗಳಿಂದ 27 ರನ್.
4ನೇ ಓವರ್‌ನಲ್ಲಿ ರಾಜ್ ಬಾವಾ ಅವರದು ಅವಳಿ ಬೇಟೆ. ವಿಲಿಯಂ ಲಕ್ಸ್‌ಟನ್ (4) ಮತ್ತು ಜಾರ್ಜ್ ಬೆಲ್ (0) ಅವರನ್ನು ಸತತ ಎಸೆತಗಳಲ್ಲಿ ಕೆಡವಿ ಇಂಗ್ಲೆಂಡ್ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದರು. ಇಬ್ಬರೂ ವಿಕೆಟ್ ಕೀಪರ್ ದಿನೇಶ್ ಬಾನಾಗೆ ಕ್ಯಾಚಿತ್ತು ವಾಪಸಾದರು. ಆಂಗ್ಲರ ಪಡೆ 47 ರನ್ನಿಗೆ 5 ವಿಕೆಟ್ ಉದುರಿಸಿಕೊಂಡು ಚಿಂತಾಜನಕ ಹಂತ ತಲುಪಿತು.
ಸ್ಕೋರ್ 61ಕ್ಕೆ ಏರಿದಾಗ ಇಂಗ್ಲೆಂಡಿನ 6ನೇ ವಿಕೆಟ್ ಪತನಗೊಂಡಿತು. ರೆಹಾನ್ ಅಹ್ಮದ್ (10) ಪೆವಿಲಿಯನ್ನಿಗೆ ಮರಳಿದರು. ರಾಜ್ ಬಾವಾ ಅವರೇ ವಿಕೆಟ್ ಟೇಕರ್.
ಮುಂದಿನ ವಿಕೆಟ್ ಬೇಟೆ ಸ್ಪಿನ್ನರ್ ಕೌಶಲ್ ತಾಂಬೆ ಅವರದು. ಇಂಗ್ಲೆಂಡಿನ ಮೊತ್ತ 91ಕ್ಕೆ ಏರಿದಾಗ 10 ರನ್ ಮಾಡಿದ ಅಲೆಕ್ಸ್ ಹಾರ್ಟನ್ ಭಾರತದ ನಾಯಕ ಧುಲ್ ಕೈಗೆ ಕ್ಯಾಚ್ ನೀಡಿ ವಾಪಸಾದರು.