Advertisement

U19 Cricket World Cup; ವಿರಾಟ್, ರಬಾಡಾ ಹಾದಿಯಲ್ಲಿ ಭವಿಷ್ಯದ ಸೂಪರ್ ಸ್ಟಾರ್ ಗಳು

06:16 PM Feb 08, 2024 | ಕೀರ್ತನ್ ಶೆಟ್ಟಿ ಬೋಳ |

ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಬಹುತೇಕರು ಈ ಹಿಂದೆ ವಯೋಮಿತಿ ಕ್ರಿಕೆಟ್ ನಲ್ಲಿ ಸಾಧನೆ ಮಾಡಿದವರು. ವಿರಾಟ್ ಕೊಹ್ಲಿ, ಕಗಿಸೊ ರಬಾಡಾ, ಕೇನ್ಸ್ ವಿಲಿಯಮ್ಸನ್, ಬಾಬರ್ ಅಜಂ, ಶುಭ್ಮನ್ ಗಿಲ್, ಟಿಮ್ ಸೌಥಿ ಮುಂತಾದವರು ಅಂಡರ್ 19 ಕ್ರಿಕೆಟ್ ನಲ್ಲಿ ಮಿಂಚಿ ಬಳಿಕ ರಾಷ್ಟ್ರೀಯ ತಂಡದ ಕದ ತಟ್ಟಿದವರು.

Advertisement

ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಅಂಡರ್ 19 ವಿಶ್ವಕಪ್ ನಡೆಯುತ್ತಿದೆ. ಭಾರತ ತಂಡವು ಮತ್ತೊಂದು ಫೈನಲ್ ಗೆ ಹೆಜ್ಜೆ ಹಾಕಿದೆ. ಕೂಟದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದ ಉದಯ್ ಶರಣನ್ ನಾಯಕತ್ವದ ಪಡೆಯು ವಿಶ್ವ ಕ್ರಿಕೆಟ್ ಗೆ ತಮ್ಮ ಖದರ್ ತೋರಿಸುತ್ತಿದೆ.

ಈ ಬಾರಿಯ ಕೂಟದಲ್ಲಿ ಮಿಂಚಿದ ಐವರು ಯುವಕರು

ಮುಶೀರ್ ಖಾನ್

ಭಾರತದ ದೇಶಿಯ ಕ್ರಿಕೆಟ್ ನಲ್ಲಿ ಸದ್ದು ಮಾಡುತ್ತಿರುವ ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ಅವರು ಸದ್ಯ ಹರಿಣಗಳ ನಾಡಿನಲ್ಲಿ ತನ್ನ ಆಲ್ ರೌಂಡ್ ಆಟದಿಂದ ಮಿಂಚು ಹರಿಸುತ್ತಿದ್ದಾರೆ. ಸೆಮಿ ಹಂತಕ್ಕೆ ಮೊದಲು ಆಡಿದ ಐದು ಪಂದ್ಯಗಳಲ್ಲಿ ಮುಶೀರ್ 83.50ರ ಸರಾಸರಿಯಲ್ಲಿ 334 ರನ್ ಗಳಿಸಿದ್ದಾರೆ. ಅಲ್ಲದೆ ನಾಲ್ಕು ವಿಕೆಟ್ ಕೂಡಾ ಕಿತ್ತಿದ್ದಾರೆ.

Advertisement

ಎರಡು ಶತಕಗಳು, ಕೇವಲ ಒಂದು ವೈಫಲ್ಯದೊಂದಿಗೆ ಐದು ಇನ್ನಿಂಗ್ಸ್‌ಗಳಲ್ಲಿ ಇದುವರೆಗಿನ ಪಂದ್ಯಾವಳಿಯಲ್ಲಿ ಮುಶೀರ್ ತನ್ನ ಛಾಪು ಮೂಡಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಅವರು ಕೇವಲ 126 ಎಸೆತಗಳಲ್ಲಿ ಅದ್ಭುತ 131 ರನ್‌ ಗಳ ಇನ್ನಿಂಗ್ಸ್ ಕಟ್ಟಿದ್ದರು. ಅಲ್ಲದೆ ಎರಡು ಅಮೂಲ್ಯವಾದ ವಿಕೆಟ್‌ ಗಳನ್ನು ಪಡೆದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ್ದರು.

ಉಬೈದ್ ಶಾ

U 19 ವಿಶ್ವಕಪ್‌ ನಲ್ಲಿ ಮಿಂಚಿದ್ದ ನಸೀಮ್ ಶಾ ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಹಂತದಲ್ಲಿ ಸದ್ದು ಮಾಡಿದರೆ ಉಬೈದ್ ತನ್ನ ಅಣ್ಣನ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ.

ಉಬೈದ್ ಈ ಈವೆಂಟ್‌ನಲ್ಲಿ ಐದು ಪಂದ್ಯಗಳ ಮೂಲಕ ಸ್ಥಿರತೆಯ ಮಾದರಿಯಾಗಿದ್ದಾರೆ, ಅವರ ಐದು ವಿಕೆಟ್ ಸಾಹಸದ ಪ್ರಯತ್ನದೊಂದಿಗೆ ಪಾಕಿಸ್ತಾನವು ಬಾಂಗ್ಲಾದೇಶದ ವಿರುದ್ದ ಅಂತಿಮ ಹಂತದಲ್ಲಿ ಗೆದ್ದು ಸೆಮಿ ಫೈನಲ್‌ನಲ್ಲಿ ಸ್ಥಾನ ಪಡೆಯಿತು.

ಬಲಗೈ ಬೌಲರ್ ಉಬೈದ್ ಹೊಸ ಚೆಂಡಿನೊಂದಿಗೆ ಸ್ವಿಂಗ್ ಉಂಟು ಮಾಡುತ್ತಾರೆ. ಅಲ್ಲದೇ ಡೆತ್ ಓವರ್ ಗಳಲ್ಲಿ ಚಾಣಾಕ್ಷ ಬೌಲಿಂಗ್ ಮಾಡುವ ಉಬೈದ್ ಭವಿಷ್ಯದಲ್ಲಿ ಪಾಕಿಸ್ತಾನಕ್ಕೆ ಭರವಸೆಯ ಆಟಗಾರನಾಗಿದ್ದಾರೆ.

ಆಡಿದ ಐದು ಪಂದ್ಯಗಳಲ್ಲಿ ಉಬೈದ್ ಶಾ 17 ವಿಕೆಟ್ ಕಬಳಿಸಿದ್ದಾರೆ. ಈ ಹಿಂದಿನ ಆವೃತ್ತಿಯ ಪಂದ್ಯಾವಳಿಗಳಲ್ಲಿ ತನ್ನದೇ ದೇಶದ ರಿಯಾಜ್ ಅಫ್ರಿದಿ (2004) ಮತ್ತು ಮುಷ್ತಾಕ್ ಅಹ್ಮದ್ (1988) ಮಾಡಿದ್ದ 19-ವಿಕೆಟ್‌ ಗಳ ಸಾಧನೆಯನ್ನು ಮೀರಿಸುವ ಅವಕಾಶ ಅವರ ಮುಂದಿದೆ.

ಕ್ವೆನಾ ಮಫಕಾ

ಪಂದ್ಯಾವಳಿಯಲ್ಲಿ ಮೂರು ಬಾರಿ ಐದು-ವಿಕೆಟ್‌ ಗಳನ್ನು ಗಳಿಸಿದ ಪ್ರಮುಖ ವಿಕೆಟ್-ಟೇಕರ್ ಆಗಿ ಮೂಡಿ ಬಂದಿರುವ ದಕ್ಷಿಣ ಆಫ್ರಿಕಾದ ವೇಗಿ ಕ್ವೆನಾ ಮಫಕಾ ಈ ಬಾರಿಯ ಹೈಲೈಟ್ ಗಳಲ್ಲಿ ಒಬ್ಬರು. 17 ವರ್ಷದ ಎಡಗೈ ವೇಗಿ ಮಫಕಾ ಅವರು ಈ ಬಾರಿ ಆರು ಪಂದ್ಯಗಳಲ್ಲಿ 21 ವಿಕೆಟ್ ಪಡೆದಿದ್ದಾರೆ.

ತವರು ನೆಲದಲ್ಲಿ ನಡೆಯುತ್ತಿರುವ ಕೂಟದಲ್ಲಿ ಪ್ರೋಟೀಸ್‌ ಗೆ ಮಫಕಾ ದೊಡ್ಡ ಶಕ್ತಿಯಾಗಿದ್ದಾರೆ. ಅವರ 21 ವಿಕೆಟ್‌ ಗಳಲ್ಲಿ ಹೆಚ್ಚಿನವು ಹೊಸ ಚೆಂಡಿನೊಂದಿಗೆ ಬಂದವು. ಇನ್ ಸ್ವಿಂಗ್ ಮತ್ತು ಔಟ್ ಸ್ವಿಂಗ್ ನಡೆಸುವ ಅವರು ಡೆತ್ ಓವರ್ ಗಳಲ್ಲಿ ತನ್ನ ಘಾತಕ ಯಾರ್ಕರ್ ಗಳಿಂದ ಬ್ಯಾಟರ್ ಗಳಿಗೆ ನಡುಕ ಹುಟ್ಟುಹಾಕುತ್ತಾರೆ.

ಪಂದ್ಯಾವಳಿಯ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 5/38 ರ ಸ್ಪೆಲ್ ನಲ್ಲಿ ನಾಲ್ಕು ವಿಕೆಟ್‌ಗಳು ಬೌಲ್ಡ್ ಅಥವಾ ಎಲ್‌ಬಿಡಬ್ಲ್ಯೂ ರೂಪದಲ್ಲಿ ಬಂದಿದ್ದವು. ಅಲ್ಲದೆ ಶ್ರೀಲಂಕಾ ವಿರುದ್ಧ ಮಫಕಾ 21 ರನ್ ನೀಡಿ ಆರು ವಿಕೆಟ್ ಕಿತ್ತ ಸಾಧನೆ ಮಾಡಿದ್ದರು.

ಹಾ ವೈಗನ್

ಉತ್ತಮ ಗುಣಮಟ್ಟದ ಆಟಗಾರರು ಪ್ರಮುಖ ಪಂದ್ಯಕ್ಕಾಗಿ ತಮ್ಮ ಅತ್ಯುತ್ತಮ ಪ್ರದರ್ಶನಗಳನ್ನು ಉಳಿಸುತ್ತಾರೆ ಎನ್ನುವ ಮಾತಿನಂತೆ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾದ ನಿರ್ಣಾಯಕ ಸೂಪರ್ ಸಿಕ್ಸ್ ಪಂದ್ಯದಲ್ಲಿ ಹಾ ವೈಗನ್ ಅವರು ಅದ್ಭುತ ಆಟವಾಡಿದರು.

ಬಲಗೈ ಬ್ಯಾಟರ್ ವೈಗನ್ ಅವರು ಇಂಗ್ಲೆಂಡ್ ವಿರುದ್ಧ 126 ಎಸೆತಗಳಲ್ಲಿ 120 ರನ್ ಗಳಿಸಿ ತಂಡ್ಕಕೆ ದಾರಿ ತೋರಿದ್ದರು. ಉಳಿದ ಬ್ಯಾಟರ್ ಗಳು ಬ್ಯಾಟಿಂಗ್ ನಡೆಸಲು ಪರದಾಡಿದರೂ ನಾಯಕನ ಆಟವಾಡದಿದ್ದ ವೈಗನ್ ತಮ್ಮ ತಂಡವನ್ನು ಸೆಮಿ ಹಂತಕ್ಕೇರಲು ಸಹಾಯ ಮಾಡಿದ್ದರು.

ಅಲ್ಲದೆ ಆರಂಭಿಕ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಹಾ ವೈಗನ್ ನಿರ್ಣಾಯಕ ಅಜೇಯ 39 ರನ್ ಗಳಿಸಿದ್ದರು. ತನ್ನ ಸ್ಥಿರ ಪ್ರದರ್ಶನ ಮುಂದುವರಿಸಿದರೆ ಕಾಂಗರೂ ನಾಡಿನ ಪರ ವೈಗನ್ ಮುಂದಿನ ದಿನಗಳಲ್ಲಿ ದೊಡ್ಡ ಶಕ್ತಿಯಾಗಬಲ್ಲರು.

ಸ್ಟೀವ್ ಸ್ಟಾಲ್ಕ್

ಈ ಬಾರಿಯ ಟೂರ್ನಮೆಂಟ್ ನಲ್ಲಿ ದಕ್ಷಿಣ ಆಫ್ರಿಕಾದ ಸ್ಟೀವ್ ಸ್ಟಾಲ್ಕ್ ಗಿಂತ ಹೆಚ್ಚಿನ ರನ್ ಬಾರಿಸಿದ್ದರೂ, ಸ್ಟಾಲ್ಕ್ ರಷ್ಟು ಸ್ಟ್ರೈಕ್ ರೇಟ್ ನಲ್ಲಿ ಯಾರೂ ಬ್ಯಾಟ್ ಬೀಸಿಲ್ಲ. ಕೂಟದಲ್ಲಿ 228 ರನ್ ಬಾರಿಸಿರುವ ಹರಿಣಗಳ ಆರಂಭಿಕ ಆಟಗಾರ ಸ್ಟಾಲ್ಕ್ 148ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದಾರೆ.

ಆ ಸ್ಟ್ರೈಕ್-ರೇಟ್ ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ U19 ವಿಶ್ವಕಪ್‌ನ ಹಿಂದಿನ ಆವೃತ್ತಿಗಳನ್ನು ಹಿಂತಿರುಗಿ ನೋಡಿದರೆ ವೆಸ್ಟ್ ಇಂಡೀಸ್‌ ನ ಕೈರನ್ ಪೊವೆಲ್ (2008 ರಲ್ಲಿ 124.01), ನ್ಯೂಜಿಲೆಂಡ್‌ ನ ಫಿನ್ ಅಲೆನ್ (2018 ರಲ್ಲಿ 119.01) ಗಿಂತ ತುಂಬಾ ಹೆಚ್ಚಿದೆ.

ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟಾಲ್ಕ್ ಕೇವಲ 37 ಎಸೆತಗಳಲ್ಲಿ 86 ರನ್ ಚಚ್ಚಿದ್ದರು. ಆ ಸ್ಪೋಟಕ ಇನ್ನಿಂಗ್ಸ್ ನಲ್ಲಿ ಅವರು ಏಳು ಬೌಂಡರಿ ಮತ್ತು ಎಂಟು ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಉತ್ತಮ ದರ್ಜೆಯ ಬ್ಯಾಟರ್ ಗಳನ್ನು ನೀಡುವ ದಕ್ಷಿಣ ಆಫ್ರಿಕಾಗೆ ಮುಂದಿನ ದಿನಗಳಲ್ಲಿ ದೊಡ್ಡ ಆಸ್ತಿಯಾಗಬಲ್ಲರು ಈ ಸ್ಟೀವ್ ಸ್ಟಾಲ್ಕ್.

ಇವರಲ್ಲದೆ ಭಾರತದ ನಾಯಕ ಉದಯ್ ಶರಣನ್, ಸಚಿನ್ ದಾಸ್, ದಕ್ಷಿಣ ಆಫ್ರಿಕಾದ ಪ್ರೆಟೋರಿಯಸ್, ಇಂಗ್ಲೆಂಡ್ ಬೌಲರ್ ತಜೀಂ ಚೌದ್ರಿ ಅಲಿ ಕೂಡಾ ಈ ಬಾರಿಯ ಅಂಡರ್ 19 ವಿಶ್ವಕಪ್ ನಲ್ಲಿ ಗಮನ ಸೆಳೆದವರು.

Advertisement

Udayavani is now on Telegram. Click here to join our channel and stay updated with the latest news.

Next