ಮುಂಬಯಿ: ಹಿಂಡನ್‌ಬರ್ಗ್ ರಿಸರ್ಚ್ ವರದಿ ಬಳಿಕ ಪತನಗೊಳ್ಳುತ್ತಾ ಸಾಗಿದ್ದ ಅದಾನಿ ಸಮೂಹದ ಷೇರುಗಳು ಮಂಗಳವಾರದ ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
ಸಾಲವನ್ನು ಅವಧಿಗೆ ಮುನ್ನವೇ ಮರುಪಾವತಿ ಮಾಡುವ ಮೂಲಕ ಹೂಡಿಕೆದಾರರಿಗೆ ಅದಾನಿ ಕಂಪೆನಿಯು ಭರವಸೆ ಕೊಟ್ಟ ಬೆನ್ನಲ್ಲೇ ಮುಂಬಯಿ ಷೇರುಪೇಟೆಯಲ್ಲಿ, ಕಂಪೆನಿಯ ಷೇರುಗಳಿಗೆ ಬೇಡಿಕೆ ಕಂಡುಬಂತು.
ಮಂಗಳವಾರದ ವಹಿವಾಟಿನ ವೇಳೆ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇ.14.63ರಷ್ಟು ಏರಿಕೆ ಕಂಡರೆ, ಅದಾನಿ ಪೋರ್ಟ್ಸ್ ಮತ್ತು ಎಪಿಎಸ್‌ಇಝೆಡ್ ಷೇರುಗಳ ಮೌಲ್ಯ ಶೇ.1.33ರಷ್ಟು ಹೆಚ್ಚಳವಾಯಿತು. ಅದಾನಿ ವಿಲ್ಮರ್ ಶೇ.4.99, ಎಸಿಸಿ ಸಿಮೆಂಟ್ ಶೇ.1.32, ಅಂಬುಜಾ ಸಿಮೆಂಟ್ ಶೇ.1.12ರಷ್ಟು ಏರಿಕೆಯಾಯಿತು. ಆದರೆ ಅದಾನಿ ಗ್ರೀನ್ ಎನರ್ಜಿ ಷೇರುಗಳು ಶೇ.5ರಷ್ಟು ಪತನಗೊಂಡವು.
ಇದೇ ವೇಳೆ ಅದಾನಿ ಗ್ರೂಪ್‌ಗೆ ಬ್ಯಾಂಕ್‌ಗಳು ನೀಡಿರುವ ಸಾಲದಿಂದ ದೊಡ್ಡ ಮಟ್ಟದ ಪ್ರತಿಕೂಲ ಪರಿಣಾಮ ಬೀರುವುದಿಲ್ಲ.
ಅದಾನಿಯು ಬ್ಯಾಂಕ್ ಸಾಲದ ಮೇಲೆಯೇ ಹೆಚ್ಚು ಅವಲಂಬಿತವಾಗಿದ್ದರೆ ಮಾತ್ರ ಬ್ಯಾಂಕ್ ರಿಸ್ಕ್ ಹೆಚ್ಚಾಗುತ್ತಿತ್ತು ಎಂದು ಮೂಡೀಸ್, ಫಿಚ್ ಸೇರಿದಂತೆ ರೇಟಿಂಗ್ ಏಜೆನ್ಸಿಗಳು ಹೇಳಿವೆ. ಇದು ಕೂಡ ಅದಾನಿ ಸಮೂಹ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.