Advertisement

U.T. Khader ವಿದ್ಯುತ್‌ ಅವಘಡಕ್ಕೆ ಅಧಿಕಾರಿಗಳೇ ಹೊಣೆ

01:19 AM Jul 01, 2024 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ವಿದ್ಯುತ್‌ ಆಘಾತದಿಂದ ಈಗಾಗಲೇ ಮೂವರು ಪ್ರಾಣ ಕಳೆದುಕೊಂಡಿದ್ದು, ಮತ್ತೆ ಇಂತಹ ಪ್ರಕರಣಗಳು ಸಂಭವಿಸಿದರೆ ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು. ಉನ್ನತ ಅಧಿಕಾರಿಗಳಿಂದ ಹಿಡಿದು ತಳಮಟ್ಟದ ಅಧಿಕಾರಿಗಳ ವರೆಗೆ ಎಲ್ಲರೂ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಮಳೆಗಾಲದ ಮುನ್ನೆಚ್ಚರಿಕೆ ಕುರಿತು ಮೆಸ್ಕಾಂ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ರವಿವಾರ ಮಂಗಳೂರಿನ ಬಿಜೈಯ ಮೆಸ್ಕಾಂ ಪ್ರಧಾನ ಕಚೇರಿಯಲ್ಲಿ ಜರಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಅಧಿಕಾರಿಯೂ ತನ್ನ ಜವಾಬ್ದಾರಿ ಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಪಾಯ ಸಂಭವಿಸಿದ ಬಳಿಕ ನಮ್ಮ ಮೇಲೆ ಪ್ರಕರಣ ದಾಖಲಿಸಬೇಡಿ ಎಂದರೆ ಆಗುವುದಿಲ್ಲ ಎಂದರು.

ಮೆಸ್ಕಾಂ ಜತೆಗೆ ಪಿಡಬ್ಲಿೂಡಿ, ಹೆದ್ದಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು. ಮರಗಳ ಗೆಲ್ಲುಗಳನ್ನು ತೆರವುಗೊಳಿಸಿವುದು, ಶಿಥಿಲವಾಗಿರುವ ಕಂಬಗಳ ತೆರವು ಮೊದಲಾದ ಕೆಲಸಗಳನ್ನು ಕ್ಷಿಪ್ರಗತಿಯಲ್ಲಿ ನಿರ್ವಹಿಸಬೇಕು. ಈಗ ತಂತ್ರಜ್ಞಾನ ಮುಂದುವರಿದಿದ್ದರೂ ಮುಂಚಿತವಾಗಿ ತೆರವುಗೊಳಿಸುವ ಕಾರ್ಯ ಯಾಕಾಗುತ್ತಿಲ್ಲ ಎಂದವರು ಪ್ರಶ್ನಿಸಿದರು.

ಟ್ರಾನ್ಸ್‌ಫಾರ್ಮರ್‌ ಆವರಣ ಸ್ವತ್ಛವಾಗಿರಲಿ
ದೇಶದ ಕೆಲವು ರಾಜ್ಯಗಳಲ್ಲಿ ವಿದ್ಯುತ್‌ ಪರಿವರ್ತಕಗಳ ಆವರಣವನ್ನು ಹೂವಿನ ಗಿಡ ಗಳನ್ನು ಬೆಳೆಸಿ ಸ್ವತ್ಛ ಹಾಗೂ ಸುಂದರವಾಗಿ ಇರಿಸುತ್ತಾರೆ. ಆದರೆ ನಮ್ಮಲ್ಲಿ ತಂತಿ ಬೇಲಿ ಹಾಕಿ ಇಡುವುದರಿಂದ ಜನರು ತ್ಯಾಜ್ಯ ಎಸೆಯುವ ತಾಣವಾಗಿ ಪರಿವರ್ತನೆಯಾಗಿದೆ. ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.

ಜನರಲ್ಲಿ ಜಾಗೃತಿ ಮೂಡಿಸಿ: ಡಿಸಿ
ವಿದ್ಯುತ್‌ ಅವಘಡಗಳಿಗೆ ಸಂಬಂಧಿಸಿ ಸಾರ್ವ ಜನಿಕರಲ್ಲಿ ಜಾಗೃತಿ, ಎಚ್ಚರಿಕೆ ಮೂಡಿಸುವ ಕೆಲಸ ಮೆಸ್ಕಾಂನಿಂದ ಆಗಬೇಕು. ಜಾಹೀರಾತುಗಳು, ಸಣ್ಣ ವೀಡಿಯೋ ಕ್ಲಿಪಿಂಗ್‌ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ವಿದ್ಯುತ್‌ ಆಘಾತದ ಸಂದರ್ಭದಲ್ಲಿ ಯಾವ ರೀತಿ ಪ್ರಾಣವನ್ನು ರಕ್ಷಿಸಬೇಕು ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಆಗಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದರು.

Advertisement

ಮೆಸ್ಕಾಂ ಎಂ.ಡಿ. ಪದ್ಮಾವತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೋನಿ ಮರಿಯಪ್ಪ, ಪಿಡಬ್ಲಿೂಡಿ, ಅರಣ್ಯ ಇಲಾಖೆ ಮತ್ತು ಕೆಪಿಟಿಸಿಎಲ್‌ ಅಧಿಕಾರಿಗಳು ಭಾಗವಹಿಸಿದ್ದರು.

ಪವರ್‌ಮ್ಯಾನ್‌ಗಳ ಕೊರತೆ
ಮೆಸ್ಕಾಂ ವ್ಯಾಪ್ತಿಯಲ್ಲಿ ಶೇ.50ರಷ್ಟು ಪವರ್‌ಮ್ಯಾನ್‌ಗಳ ಕೊರತೆಯಿದೆ. ಇದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ಖಾದರ್‌ ಗಮನಕ್ಕೆ ತಂದರು. ಹೊರ ಜಿಲ್ಲೆಗಳಿಂದ ಆಯ್ಕೆಯಾಗಿ ಬರುವ ಪವರ್‌ಮ್ಯಾನ್‌ಗಳು ಕೆಲವು ಸಮಯ ಕೆಲಸ ಮಾಡಿ ಬಳಿಕ ತಮ್ಮ ಜಿಲ್ಲೆಗೆ ವರ್ಗಾವಣೆ ಪಡೆದುಕೊಂಡು ತೆರಳುತ್ತಾರೆ ಎಂದು ಎಂಡಿ ಪದ್ಮಾವತಿ ತಿಳಿಸಿದರು. ಅಂಥವರಿಗೆ ಎನ್‌ಒಸಿ ನೀಡದಂತೆ ಖಾದರ್‌ ಸೂಚಿಸಿದರು.

ಭೂಗತ ವಿದ್ಯುತ್‌ಲೈನ್‌ ಅಳವಡಿಕೆ ಪ್ರಗತಿಯಲ್ಲಿ
ಮಂಗಳೂರು ನಗರದಲ್ಲಿ 76 ಕೋ.ರೂ. ವೆಚ್ಚದಲ್ಲಿ ಎಡಿಬಿ ಏರಿಯಾದಲ್ಲಿ ಮಾದರಿಯಾಗಿ ಭೂಗತ ಕೇಬಲ್‌ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಉಳ್ಳಾಲದಲ್ಲಿ ಭೂಗತ ವಿದ್ಯುತ್‌ ಸಂಪರ್ಕಕ್ಕೆ ಸಂಬಂಧಿಸಿ 230 ಕೋ.ರೂ. ಮೊತ್ತದ ಡಿಪಿಆರ್‌ ಇಲಾಖೆಗೆ ಸಲ್ಲಿಸಲಾಗಿದೆ. ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಅರಣ್ಯ ಇಲಾಖೆ, ಪಿಡಬ್ಲಿುÂಡಿ ಇಲಾಖೆಗಳೊಂದಿಗೆ ಚರ್ಚಿಸಿ ಕೆಲಸ ನಿರ್ವಹಿಸಿ ಎಂದು ಖಾದರ್‌ ಅವರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next