Advertisement

U.S. Open ಅಮೆರಿಕದ ಟೆನಿಸ್‌ ವೈಭವ

11:29 PM Aug 26, 2023 | Team Udayavani |

ವರ್ಷವಿಡೀ ನಾನಾ ಟೆನಿಸ್‌ ಸ್ಪರ್ಧೆಗಳು ನಡೆದರೂ ಗ್ರ್ಯಾನ್‌ಸ್ಲಾಮ್‌ಗಳ ಸಂಖ್ಯೆ ಕೇವಲ ನಾಲ್ಕು. ಆಸ್ಟ್ರೇಲಿಯನ್‌ ಓಪನ್‌, ಫ್ರೆಂಚ್‌ ಓಪನ್‌, ವಿಂಬಲ್ಡನ್‌ ಮತ್ತು ಯುಎಸ್‌ ಓಪನ್‌. ಇವುಗಳಲ್ಲಿ ಗ್ರ್ಯಾನ್‌ಸ್ಲಾಮ್‌ ಕಿಂಗ್‌ ಎನಿಸಿಕೊಳ್ಳುವ ಹೆಗ್ಗಳಿಕೆ ಹೊಂದಿರುವುದು ನ್ಯೂಯಾರ್ಕ್‌ನಲ್ಲಿ ನಡೆಯುವ ಯುಎಸ್‌ ಓಪನ್‌ ಪಂದ್ಯಾವಳಿ. “ಟೆನಿಸ್‌ ಸಮಾನತೆ’ಯನ್ನು ಪ್ರತಿಪಾದಿಸಿದ ಈ ಕ್ರೀಡಾಕೂಟ ಇದೇ ಅ. 28ರಂದು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅಮೆರಿಕನ್‌ ಟೆನಿಸ್‌ ಸ್ಪರ್ಧೆಯ ಒಂದಿಷ್ಟು ಝಲಕ್‌.

Advertisement

1881ರಷ್ಟು ಪುರಾತನ
ಈ ಪಂದ್ಯಾವಳಿ ಮೊದಲ್ಗೊಂಡದ್ದು
1881ರಷ್ಟು ಹಿಂದೆ. 142 ವರ್ಷಗಳ ಭವ್ಯ ಹಾಗೂ ಸುದೀರ್ಘ‌ ಇತಿಹಾಸವನ್ನು ಇದು ಹೊಂದಿದೆ. ಅಂದು ಈ ಟೂರ್ನಿಯ ಹೆಸರು “ಯುಎಸ್‌ ನ್ಯಾಶನಲ್‌ ಚಾಂಪಿಯನ್‌ಶಿಪ್‌’ ಎಂದಿತ್ತು. ಯುಎಸ್‌ ನ್ಯಾಶನಲ್‌ ಲಾನ್‌ ಟೆನಿಸ್‌ ಅಸೋಸಿಯೇಶನ್‌ ರೋಡ್‌ ಐಲ್ಯಾಂಡ್‌ನ‌ಲ್ಲಿ ಇದನ್ನು ಪ್ರಾರಂಭಿಸಿತು. ಅಂದು ಇದು ಕೇವಲ ಪುರುಷರ ಸಿಂಗಲ್ಸ್‌ ಮತ್ತು ಡಬಲ್ಸ್‌ ಸ್ಪರ್ಧೆಗಳಿಗೆ ಮೀಸಲಾಗಿತ್ತು. 1887ರಲ್ಲಿ ವನಿತಾ ಸಿಂಗಲ್ಸ್‌, 1889ರಲ್ಲಿ ವನಿತಾ ಡಬಲ್ಸ್‌, 1892ರಲ್ಲಿ ಮಿಶ್ರ ಡಬಲ್ಸ್‌ ಮೊದಲ್ಗೊಂಡಿತು.

ಯುಎಸ್‌ ಓಪನ್‌ ನಾಮಕರಣ
ಈ ಕೂಟಕ್ಕೆ “ಯುನೈಟೆಡ್‌ ಸ್ಟೇಟ್ಸ್‌ ಓಪನ್‌ ಟೆನಿಸ್‌’ (ಯುಎಸ್‌ ಓಪನ್‌) ಎಂದು ನಾಮಕರಣವಾದದ್ದು 1968ರಲ್ಲಿ. ಅಂದರೆ ಈ ಕೂಟ ಆರಂಭಗೊಂಡು ಬರೋಬ್ಬರಿ 87 ವರ್ಷಗಳ ಬಳಿಕ. ಅಲ್ಲಿಯ ತನಕ ಬೇರೆ ಬೇರೆ ಕಡೆ ಪ್ರತ್ಯೇಕವಾಗಿ ನಡೆಯುತ್ತಿದ್ದ ರ್ಯಾಕೆಟ್‌ ಸಮರವನ್ನು ಒಂದೇ ಸೂರಿನಡಿ ತರಲಾಯಿತು. ಈ ತಾಣವೇ ಕ್ವೀನ್ಸ್‌ನ ಫಾರೆಸ್ಟ್‌ ಹಿಲ್ಸ್‌ನಲ್ಲಿರುವ “ವೆಸ್ಟ್‌ ಸೈಡ್‌ ಟೆನಿಸ್‌ ಕ್ಲಬ್‌’. ಆರ್ಥರ್‌ ಆ್ಯಶ್‌ ಮತ್ತು ವರ್ಜಿನಿಯಾ ವೇಡ್‌ ಮೊದಲ ಯುಎಸ್‌ ಓಪನ್‌ ಚಾಂಪಿಯನ್ಸ್‌.

ಎಲ್ಲ ಅಂಕಣಗಳಲ್ಲೂ ಆಟ
ಇದು ಎಲ್ಲ ಬಗೆಯ ಅಂಕಣಗಳಲ್ಲೂ (ಕೋರ್ಟ್‌) ನಡೆದ ವಿಶ್ವ ಏಕೈಕ ಗ್ರ್ಯಾ ನ್‌ಸ್ಲಾಮ್‌ ಎಂಬ ಹಿರಿಮೆಯನ್ನು ಹೊಂದಿದೆ. 1881ರಿಂದ 1974ರ ತನಕ ಗ್ರಾಸ್‌ ಕೋರ್ಟ್‌ನಲ್ಲಿ ನಡೆದರೆ, 1975ರಿಂದ 1977ರ ತನಕ 3 ವರ್ಷ ಕ್ಲೇ ಕೋರ್ಟ್‌ನಲ್ಲೂ ಆಡ ಲಾಯಿತು. 1978ರ ಬಳಿಕ ಖಾಯಂ ಆಗಿ ಹಾರ್ಡ್‌ ಕೋರ್ಟ್‌ನಲ್ಲಿ ನಡೆಯುತ್ತ ಬಂದಿದೆ. “ಡೆಕೊ ಸಫೇìಸ್‌’ ಎಂಬುದು ಅಂಕಣದ ಹೆಸರು.

ನೈಟ್‌ ಗೇಮ್‌
ರೋಮಾಂಚನ
1975ರಲ್ಲಿ ಆವೆಯಂಗಳದಲ್ಲಿ ಕೂಟವನ್ನು ಆಯೋಜಿಸಿದಾಗ ಮೊದಲ ಬಾರಿಗೆ ರಾತ್ರಿ ಪಂದ್ಯಗಳೂ ನಡೆದವು. ಇಲ್ಲಿ ಮೊದಲ ಬಾರಿಗೆ ಎದುರಾದವರು ನ್ಯೂಜಿಲ್ಯಾಂಡ್‌ನ‌ ಓನ್ನಿ ಪಾರುನ್‌ ಮತ್ತು ಮಾಜಿ ಯುಎಸ್‌ ಚಾಂಪಿಯನ್‌ ಸ್ಟಾನ್‌ ಸ್ಮಿತ್‌.

Advertisement

ಇತಿಹಾಸ ನಿರ್ಮಿಸಿದ ಗಿಬ್ಸನ್‌
ಸುದೀರ್ಘ‌ ಇತಿಹಾಸವುಳ್ಳ ಪಂದ್ಯಾವಳಿಯಲ್ಲಿ ನಿರ್ಮಾಣವಾಗುವ ಐತಿಹಾಸಿಕ ಸಾಧನೆಗಳ ಪಾಲು ಸಹಜವಾಗಿ ದೊಡ್ಡದಿರುತ್ತದೆ. ಅಥಿಯಾ ಗಿಬ್ಸನ್‌ ಅವರ 1950ರ ಗೆಲುವು ಇದರಲ್ಲಿ ಪ್ರಮುಖವಾದುದು. ಟೆನಿಸ್‌ನಲ್ಲಿ ಅಮೆರಿಕದ ಪ್ರಾಬಲ್ಯವನ್ನು ಮುರಿದ ಹೆಗ್ಗಳಿಕೆ ಇವರದು. ಈಕೆ ಯುಎಸ್‌ ನ್ಯಾಶನಲ್‌ ಚಾಂಪಿಯನ್‌ ಎನಿಸಿಕೊಂಡ ಮೊದಲ ಆಫ್ರಿಕನ್‌-ಅಮೆರಿಕನ್‌ ಆಟಗಾರ್ತಿ. ಇಲ್ಲಿ ಪ್ರಶಸ್ತಿ ಗೆದ್ದ ಮೊದಲ ಕಪ್ಪು ಆಟಗಾರ್ತಿ ಕೂಡ ಹೌದು.

ಹೋರಾಟಕ್ಕೆ 50 ವರ್ಷ
ಪುರುಷ ಹಾಗೂ ಮಹಿಳಾ ಚಾಂಪಿಯನ್‌ಗಳಿಗೆ ಸಮಾನ ಮೊತ್ತದ ಬಹುಮಾನವನ್ನು ನೀಡುತ್ತಿರುವುದು ಯುಎಸ್‌ ಓಪನ್‌ ವೈಶಿಷ್ಟ್ಯ. ಇದು ಜಾರಿಗೊಂಡದ್ದು 1973ರಲ್ಲಿ. ಇದು ಲೆಜೆಂಡ್ರಿ ಆಟಗಾರ್ತಿ ಬಿಲ್ಲಿ ಜೀನ್‌ ಕಿಂಗ್‌ ಅವರ ಹೋರಾಟ ಫ‌ಲ. 1972ರಲ್ಲಿ ಚಾಂಪಿಯನ್‌ ಆದಾಗ ಬಿಲ್ಲಿ ಪಡೆದದ್ದು ಕೇವಲ 10 ಸಾವಿರ ಡಾಲರ್‌. ಅಂದರೆ ಪುರುಷ ಚಾಂಪಿಯನ್‌ಗಿಂತ 15 ಸಾವಿರ ಡಾಲರ್‌ ಕಡಿಮೆ ಮೊತ್ತ. ಈ ಮೊತ್ತದಲ್ಲಿ ಸಮಾನತೆ ತಾರದೇ ಹೋದರೆ ತಾನು ಮುಂದಿನ ವರ್ಷದ ಪಂದ್ಯಾವಳಿಯನ್ನು ಬಹಿಷ್ಕರಿಸುವುದಾಗಿ ಬಿಲ್ಲಿ ಜೀನ್‌ ಕಿಂಗ್‌ ಬೆದರಿಕೆ ಯೊಡ್ಡಿದರು. ಇದು ಫ‌ಲ ಕೊಟ್ಟಿತು. ಮೊನ್ನೆ ಈ ಪ್ರತಿಭಟನೆಯ 50ನೇ ವರ್ಷಾಚರಣೆಯನ್ನು ಯುನೈಟೆಡ್‌ ಸ್ಟೇಟ್ಸ್‌ ಟೆನಿಸ್‌ ಅಸೋಸಿಯೇಶನ್‌ ಭರ್ಜರಿಯಾಗಿಯೇ ಆಚರಿಸಿತು.

ದೊಡ್ಡ ಮೊತ್ತದ ಬಹುಮಾನ
ಗ್ರ್ಯಾನ್‌ಸ್ಲಾಮ್‌ಗಳಲ್ಲೇ ಯುಎಸ್‌ ಓಪನ್‌ ದೊಡ್ಡ ಮೊತ್ತದ ಬಹುಮಾನವನ್ನು ಮೀಸಲಿರಿಸಿದೆ. ಈ ವರ್ಷದ ಒಟ್ಟು ಬಹುಮಾನದ ಮೊತ್ತ 65 ಮಿಲಿಯನ್‌ ಡಾಲರ್‌. 2022ರ ಮೊತ್ತಕ್ಕಿಂತ ಶೇ. 8ರಷ್ಟು ಹೆಚ್ಚಳವಾಗಿದೆ. ವಿಜೇತರಿಗೆ ಬೇರೆಲ್ಲ ಗ್ರ್ಯಾನ್‌ಸ್ಲಾಮ್‌ಗಳಿಗಿಂತಲೂ ಹೆಚ್ಚಿನ 3 ಮಿ. ಡಾಲರ್‌ ಬಹುಮಾನ ಲಭಿಸುತ್ತದೆ.ಹೋಲಿಕೆ ಮಾಡುವುದಾದರೆ ಈ ವರ್ಷದ ವಿಂಬಲ್ಡನ್‌ ಬಹುಮಾನ ಮೊತ್ತ 56.6 ಮಿ. ಡಾಲರ್‌. ಫ್ರೆಂಚ್‌ ಓಪನ್‌ 53.9 ಮಿ. ಡಾಲರ್‌ ಹಾಗೂ ಆಸ್ಟ್ರೇಲಿಯನ್‌ ಓಪನ್‌ 53.4 ಮಿ. ಡಾಲರ್‌ ಬಹುಮಾನವನ್ನು ಮೀಸಲಿರಿಸಿದ್ದವು.

ಒಮ್ಮೆ ಮಾತ್ರ 3ನೇ ಕ್ರಮಾಂಕ
ವರ್ಷದ 4 ಗ್ರ್ಯಾನ್‌ಸ್ಲಾಮ್‌ಗಳು ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿವೆ. ಜನವರಿಯಲ್ಲಿ ಆಸ್ಟ್ರೇಲಿಯನ್‌ ಓಪನ್‌, ಮೇ-ಜೂನ್‌ನಲ್ಲಿ ಫ್ರೆಂಚ್‌ ಓಪನ್‌, ಜುಲೈಯಲ್ಲಿ ವಿಂಬಲ್ಡನ್‌, ಆಗಸ್ಟ್‌-ಸೆಪ್ಟಂಬರ್‌ನಲ್ಲಿ ಯುಎಸ್‌ ಓಪನ್‌ ನಡೆಯುವುದು ವಾಡಿಕೆ. ಆದರೆ 2020ರಲ್ಲಿ ಕಾಡಿದ ಕೊರೊನಾದಿಂದಾಗಿ ಈ ಕ್ರಮಾಂಕದಲ್ಲಿ ತುಸು ಬದಲಾವಣೆ ಗೋಚರಿಸಿತು. ಅಂದು ಆಸ್ಟ್ರೇಲಿಯನ್‌ ಓಪನ್‌ ನಿಗದಿತ ಸಮಯದಲ್ಲೇ ನಡೆಯಿತು. ಆದರೆ ವಿಂಬಲ್ಡನ್‌ ರದ್ದುಗೊಂಡಿತು. ಫ್ರೆಂಚ್‌ ಓಪನ್‌ ಸೆಪ್ಟಂಬರ್‌-ಅಕ್ಟೋಬರ್‌ಗೆ ಮುಂದೂಡಲ್ಪಟ್ಟಿತು. ಈ ನಡುವೆ ನಿಗದಿತ ವೇಳೆಯಲ್ಲಿ ಯುಎಸ್‌ ಓಪನ್‌ ನಡೆಯಿತಾದರೂ ಇದು ವರ್ಷದ ತೃತೀಯ ಗ್ರ್ಯಾನ್‌ಸ್ಲಾಮ್‌ (ವಿಂಬಲ್ಡನ್‌ ರದ್ದಾದುದನ್ನು ಪರಿಗಣಿಸಿದರೆ ದ್ವಿತೀಯ) ಆಗಿ ದಾಖಲಾಯಿತು.

-  ಎಚ್‌.ಪಿ. ಕಾಮತ್‌

 

Advertisement

Udayavani is now on Telegram. Click here to join our channel and stay updated with the latest news.

Next