Advertisement
ರಮಣಿ ಟೀಚರ್ ಅವರು ಮೊಗೇರ ಸಮುದಾಯದ ಕೃಷಿ ಕಾರ್ಮಿಕ ಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ವಿದ್ಯಾರ್ಜನೆ ಮಾಡಿದವರು. ಬಡತನ ಮತ್ತು ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಅಕ್ಷರದ ಬೆಳಕನ್ನು ಅರಸುತ್ತಾ ತರಬೇತಿ ಪಡೆದು ಶಿಕ್ಷಕಿಯಾದರು. ಇದೇ ಕಾಲಘಟ್ಟದಲ್ಲಿ ಮಂಜೇಶ್ವರದ ಕಣ್ಣಪ್ಪ ಐಲ್ ಮತ್ತು ಅವರ ಪತ್ನಿ ಲಕ್ಷಿ$¾ ಕುಂಜತ್ತೂರು, ಉಡುಪಿಯ ನಾಗಮ್ಮ ಮೊದಲಾದವರು ಮಾರ್ಗದರ್ಶಕರಾಗಿದ್ದರು.
ರಜಾದಿನಗಳಲ್ಲೂ ಮಕ್ಕಳೊಂದಿಗೆ ಬೆರೆಯುತ್ತಿದ್ದ ರಮಣಿ ಟೀಚರ್ ಮಕ್ಕಳಿಗೆ ಕಥೆ ಹೇಳುವ ಕಲೆಯನ್ನು ಕರಗತಮಾಡಿಕೊಂಡಿದ್ದರು. ಪತ್ರಿಕೆ, ಪುಸ್ತಕಗಳನ್ನು ಓದಲು ಪ್ರೇರೇಪಿ ಸುತ್ತಿದ್ದರು. ರಾಜ್ಯದಲ್ಲಿ ಸಾಕ್ಷರತಾ ಆಂದೋಲನ ಪ್ರಾರಂಭ ವಾಗುವ ಎಷ್ಟೋ ವರ್ಷಗಳ ಮೊದಲೇ ಕುಂಬಳೆ ರಾಮ ಮಾಸ್ತರ್, ನೆಲ್ಲಿಕುಂಜೆ ಅಮ್ಮು ಮಾಸ್ತರ್, ಬೇಳ ಸೂರ್ಯ ಮಾಸ್ತರ್ ಮೊದಲಾದವರು ಹಳ್ಳಿ ಹಳ್ಳಿಗಳಲ್ಲಿ ಬಡ ಕಾರ್ಮಿಕರಿಗೆ ಅಕ್ಷರದ ಬೆಳಕನ್ನು ನೀಡುತ್ತಿದ್ದರು. ಬೇಳ, ನೆಲ್ಲಿಕುಂಜೆ, ಕಜಂಪಾಡಿ, ಉಳಿಯತ್ತಡ್ಕ ಮೊದಲಾದೆಡೆಗಳಲ್ಲಿ ಪರಿಶಿಷ್ಟ ಜಾತಿಯವರಿಗೇ ವಿದ್ಯಾಲಯಗಳು ಸ್ಥಾಪಿತವಾಗಿತ್ತು. ಹಿರಿಯ ಅಧ್ಯಾಪಕರ ಸಾಧನೆಗಳು ರಮಣಿ ಟೀಚರ್ ಅವರಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಿತ್ತು.
Related Articles
Advertisement
ರಮಣಿ ಟೀಚರ್ ಅವರನ್ನು ಕೇರಳ ಶಿಕ್ಷಣ ಇಲಾಖೆ ಗೌರವಿಸಿದೆ. ಎ.ಕೆ. ವಾಸುದೇವ ರಾವ್ ಅಧ್ಯಕ್ಷರಾಗಿದ್ದಾಗ ಮಧೂರು ಗ್ರಾಮ ಪಂಚಾಯತ್ ವತಿಯಿಂದ ಸಮ್ಮಾನಿಸಲಾಗಿದೆ. ಹಿರಿಯ ನಾಗರಿಕರ ವೇದಿಕೆಯ ಮಧೂರು ಘಟಕ, ಪಿಂಚಣಿದಾರರ ಸಂಘಟನೆಯ ಜಿಲ್ಲಾ ಸಮಿತಿ, ಸಿರಿಬಾಗಿಲು ಶಾಲೆಯ ರಕ್ಷಕ ಶಿಕ್ಷಕ ಸಂಘ ಮೊದಲಾದ ಸಂಸ್ಥೆಗಳು ಸಮ್ಮಾನಿಸಿವೆ.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸುವರ್ಣ ಕರ್ನಾಟಕ ಪ್ರಶಸ್ತಿಯೂ ಅವರಿಗೆ ಲಭಿಸಿದೆ. ಪತಿ ಕೆ. ಕಮಲಾಕ್ಷ ಅವರು ಭಾರತೀಯ ಸೈನ್ಯದಲ್ಲಿ ಯೋಧರಾಗಿ ಸುದೀರ್ಘಕಾಲ ಸೇವೆ ಸಲ್ಲಿಸಿದ್ದರು. ಎರಡನೇ ಲೋಕ ಮಹಾಯುದ್ಧದಲ್ಲಿ ಭಾಗವಹಿಸಿದ್ದರು. ನಿವೃತ್ತರಾದ ಬಳಿಕ ಕೆಲವು ಕಾಲ ಜನತಾ ಪಾರ್ಟಿಯ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದರು. ಭೋಪಾಲದಲ್ಲಿದ್ದಾಗ ಕೆ.ಚಂದ್ರಶೇಖರ್, ಬೆಂಗಳೂರಿನಲ್ಲಿದ್ದಾಗ ರಾಮಕೃಷ್ಣ ಹೆಗ್ಗಡೆಯವರ ಪರಿಚಯ ಮತ್ತು ಸಂಪರ್ಕವಿತ್ತು. ಉಳಿಯ ಮದರ (ರಮಣಿ ಟೀಚರ್ ಅವರ ತಂದೆ) ಶಿರಿಬಾಗಿಲು ಶಾಲೆಗೆ ಉದಾರವಾಗಿ ನಿರ್ಮಿಸಿಕೊಟ್ಟ ರಂಗಸ್ಥಳವನ್ನು ಮುಖ್ಯಮಂತ್ರಿಯಾಗಿದ್ದ ಇ.ಎಂ.ಎಸ್. ನಂಬೂದಿರಿಪಾಡ್ ಉದ್ಘಾಟಿಸಿದ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಲಾಗಿತ್ತು. ಕೆ. ಕಮಲಾಕ್ಷ ಅವರು 1994ರಲ್ಲಿ ನಿಧನ ಹೊಂದಿದರು.
ರಮಣಿ ಟೀಚರ್ ಅವರಿಗೆ ಇಬ್ಬರು ಮಕ್ಕಳು. ಹಿರಿಯ ಪುತ್ರ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಕವಿಯಾಗಿ, ಪತ್ರಕರ್ತರಾಗಿ ಪ್ರಸಿದ್ಧರು. ಕಿರಿಯ ಪುತ್ರ ರಾಜಶೇಖರ ಕೆ. ಕೇರಳ ಗ್ರಾಮೀಣ ಬ್ಯಾಂಕ್‌ನಲ್ಲಿ ದುಡಿಯುತ್ತಿದ್ದಾರೆ. ಸರಳತೆ, ಸಹೃದಯತೆ, ಪ್ರಾಮಾಣಿಕತೆ, ವೃತ್ತಿ ಘನತೆ ಮತ್ತು ಪರೋಪಕಾರ ಪ್ರವೃತ್ತಿಯಿಂದ ರಮಣಿ ಟೀಚರ್ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮೊಗೇರ ಸಮುದಾಯದ ಈ ಹಿರಿಯ ಚೇತನ 88ರ ಹರೆಯದಲ್ಲಿ ಜುಲೈ 16 ರಂದು ನಿಧನ ಹೊಂದಿದರು.
ಜು.16ರಂದು ನಿಧನ ಹೊಂದಿದ ಉಳಿಯತ್ತಡ್ಕದ ರಮಣಿ ಟೀಚರ್ ಅಪಾರ ಶಿಷ್ಯ ವಲಯವನ್ನು ವಿಸ್ತರಿಸಿದವರು. ಮೊಗೇರ ಸಮುದಾಯದ ಈ ಹಿರಿಯ ಚೇತನ ದೀನದಲಿತರಿಗೆ ಅರವಿನ ಬೆಳಕನ್ನು ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡಿದವರು. ಸರಳತೆಯ ಪ್ರತೀಕವಾಗಿದ್ದ ಟೀಚರ್ ಅವರ ಅಗಲುವಿಕೆ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವೆಂದೇ ಹೇಳಬಹುದು.
– ಪ್ರದೀಪ್ ಬೇಕಲ್