Advertisement

ಪಾಕ್‌ಗೆ ಸೊಪ್ಪು ಹಾಕದ ವಿಶ್ವಸಂಸ್ಥೆ

09:48 AM Aug 18, 2019 | Team Udayavani |

ನ್ಯೂಯಾರ್ಕ್‌: ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿದ್ದನ್ನು ವಿರೋಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೊರೆ ಹೋಗಿದ್ದ ಪಾಕ್‌ಗೆ ಮುಖಭಂಗ ವಾಗಿದ್ದು, ಯಾವುದೇ ನಿಲುವಳಿಯ ನ್ನಾಗಲಿ, ಹೇಳಿಕೆಯನ್ನಾಗಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೊರಡಿಸಿಲ್ಲ. ಶುಕ್ರವಾರವಿಶ್ವಸಂಸ್ಥೆಯ ಭದ್ರತಾ ಮಂಡಳಿಸಭೆಯಲ್ಲಿ ಕಾಶ್ಮೀರ ವಿಚಾರ ಅನೌಪ ಚಾರಿಕ ಚರ್ಚೆ ವೇಳೆ ಚೀನ ಈ ವಿಷಯಪ್ರಸ್ತಾವಿಸಿತು. ಆದರೆ ರಷ್ಯಾ ಇದು ಉಭಯ ದೇಶಗಳ ನಡುವಿನ ಸಮಸ್ಯೆ ಎಂದಿದೆ. ಇದು ಅನೌಪಚಾರಿಕ ಸಭೆ ಯಾದ್ದರಿಂದ ಯಾವುದೇ ಹೇಳಿಕೆಯನ್ನೂ ವಿಶ್ವಸಂಸ್ಥೆ ನೀಡಲಿಲ್ಲ. ಅಷ್ಟೇ ಅಲ್ಲ, ಈ ಚರ್ಚೆಯು ವಿಶ್ವಸಂಸ್ಥೆಯ ಕಡತಗಳಲ್ಲೂ ದಾಖಲಾಗಿಲ್ಲ.

Advertisement

ವಿಶ್ವಸಂಸ್ಥೆಯ ಅನೌಪಚಾರಿಕ ಸಭೆ ಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾವಿ ಸುವಂತೆ ಮಾಡಿದ್ದೇ ತನ್ನ ಸಾಧನೆ ಎಂಬಂತೆ ಪಾಕಿಸ್ಥಾನ ಸದ್ಯ ಬೀಗುತ್ತಿದೆ. ಸಭೆಯ ಅನಂತರ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಚೀನದ ಶಾಶ್ವತ ಪ್ರತಿನಿಧಿ ಝಾಂಗ್‌ ಉನ್‌, ಭಾರತದ ಕ್ರಮ ಪ್ರಾದೇಶಿಕ ಶಾಂತಿ ಕದಡಿದೆ ಎಂದಿದ್ದಾರೆ.

ಕಾಶ್ಮೀರ ಆಂತರಿಕ ವಿಷಯ ಎಂದ ರಷ್ಯಾ
ಭಾರತ ಮತ್ತು ಪಾಕಿಸ್ಥಾನಗಳು ನಮ್ಮ ಮಿತ್ರ ರಾಷ್ಟ್ರವಾಗಿದ್ದು, ಎರಡೂ ದೇಶಗಳಿಗೆ ನಾವು ಸಹಕಾರ ನೀಡುತ್ತಿದ್ದೇವೆ. ಕಾಶ್ಮೀರ ವಿಷಯವು ಭಾರತದ ಆಂತರಿಕ ವಿಷಯವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ರಷ್ಯಾದ ಪ್ರತಿನಿಧಿ ಡಿಮಿಟ್ರಿ ಪೊಲಿನ್‌ಸ್ಕೀ ಹೇಳಿದ್ದಾರೆ. ಈ ಮೂಲಕ ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನಕ್ಕೆ ಬೆಂಬಲ ನೀಡದಿರಲು ರಷ್ಯಾ ನಿರ್ಧರಿಸಿದೆ.

370ನೇ ವಿಧಿ ರದ್ದು ಭಾರತದ ಆಂತರಿಕ ವಿಷಯ
ಜಮ್ಮು ಕಾಶ್ಮೀರದ 370ನೇ ವಿಧಿ ರದ್ದತಿಯು ಸಂಪೂರ್ಣ ಭಾರತದ ಆಂತರಿಕ ವಿಷಯವಾಗಿದ್ದು, ಇದರಿಂದಾಗಿ ಯಾವುದೇ ಇತರ ದೇಶಗಳಿಗೆ ಬಾಧೆಯಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಸೈಯದ್‌ ಅಕ್ಬರುದ್ದೀನ್‌ ಹೇಳಿದ್ದಾರೆ. ಕಾಶ್ಮೀರ ವಿಷಯದಲ್ಲಿ ಭಾರತ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಸಹಿಸುವುದಿಲ್ಲ. ವಿಶ್ವವನ್ನು ತಪ್ಪುದಾರಿಗೆಳೆಯಲು ಪಾಕಿಸ್ಥಾನ ಯತ್ನಿಸುತ್ತಿದೆ ಎಂದು ಸೈಯದ್‌ ಹೇಳಿದ್ದಾರೆ.
ಜಮ್ಮು: ಹಂತ ಹಂತವಾಗಿ ನಿರ್ಬಂಧ ತೆರವು
ವಿಶೇಷ ಸ್ಥಾನಮಾನ ರದ್ದಾದ ಹಿನ್ನೆಲೆಯಲ್ಲಿ ಕಳೆದ 12 ದಿನಗಳಿಂದ ನಿರ್ಬಂಧದ ನಡುವೆ ದಿನ ಕಳೆಯುತ್ತಿರುವ ಜಮ್ಮು-ಕಾಶ್ಮೀರದ ಜನತೆ ಶನಿವಾರದಿಂದ ಸ್ವಲ್ಪಮಟ್ಟಿಗೆ ನಿರಾಳರಾಗಲಿದ್ದಾರೆ. ಕಾಶ್ಮೀರದಲ್ಲಿನ ಬಹುತೇಕ ಫೋನ್‌ ಲೈನ್‌ಗಳನ್ನು ಶನಿವಾರ ಪುನಃಸ್ಥಾಪಿಸಲಾಗುವುದು ಹಾಗೂ ಸೋಮವಾರದಿಂದಲೇ ಶಾಲೆ-ಕಾಲೇಜುಗಳು ಪುನರಾರಂಭ ವಾಗಲಿದೆ ಎಂದು ಶುಕ್ರವಾರ ರಾಜ್ಯದ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್‌. ಸುಬ್ರಹ್ಮಣ್ಯನ್‌ ಘೋಷಿಸಿದ್ದಾರೆ.
ಪಾಕ್‌ ಉಗ್ರರಿಂದ ಜೆಹಾದ್‌ಗೆ ಸಂಚು
ಪಾಕಿಸ್ಥಾನದ ವಿವಿಧ ಉಗ್ರ ಸಂಘಟನೆಗಳು ಒಂದಾಗಿ ಭಾರತದ ವಿರುದ್ಧ ಜೆಹಾದ್‌ ನಡೆಸಲು ಸಂಚು ರೂಪಿಸಿವೆ ಎಂಬ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳು ನೀಡಿವೆ. ಹಿಜ್ಬುಲ್ ಮುಜಾಹಿದೀನ್‌ ಹಾಗೂ ಸೈಯದ್‌ ಸಲಾಹುದ್ದೀನ್‌ ನೇತೃತ್ವದ ಯುನೈಟೆಡ್‌ ಜೆಹಾದ್‌ ಕೌನ್ಸಿಲ್(ಯುಜೆಸಿ)ಗೆ ಭಾರತದ ವಿರುದ್ಧದ ದಾಳಿಗೆ ಪಾಕ್‌ ಪ್ರಚೋದನೆ ನೀಡುತ್ತಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಸಹಿತ ದೇಶಾದ್ಯಂತ ಹೈಅಲರ್ಟ್‌ ಘೋಷಿಸಲಾಗಿದೆ. ಎಲ್ಲ ಭದ್ರತಾ ನೆಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next