Advertisement

ಒಲಿಂಪಿಕ್ಸ್‌ನಲ್ಲಿ ಕಬಡ್ಡಿ ಸೇರ್ಪಡೆಗೆ ಭಾರತದ ಪ್ರಯತ್ನ​​​​​​​

06:20 AM Apr 16, 2018 | Team Udayavani |

ಕುಂದಾಪುರ: ಪ್ರೊ| ಕಬಡ್ಡಿ ತಂಡಗಳಲ್ಲಿ ಒಂದಾದ “ಯು ಮುಂಬಾ’ ಕೋಚ್‌ ರವಿ ಶೆಟ್ಟಿ ಅವರು ಈಗ ಭಾರತೀಯ ಕಬಡ್ಡಿ ಕೋಚ್‌ಗಳಲ್ಲಿ ಅಗ್ರಗಣ್ಯರು. ಮೂಲತಃ ಅಂಕೋಲಾದವರಾದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ಮಲೇಷ್ಯಾ ತಂಡಕ್ಕೆ 2 ವರ್ಷಗಳ ಕಾಲ ತರಬೇತಿ ನೀಡಿದ ಅನುಭವ ಉಳ್ಳ ಅವರು ರಾಜ್ಯ ತಂಡಕ್ಕೂ ನಿರಂತರವಾಗಿ ತರಬೇತಿ ನೀಡುತ್ತಿದ್ದಾರೆ.

Advertisement

2014 ರಿಂದಲೂ ಕೋಚ್‌ ಆಗಿರುವ ಮೂಲತಃ ಅಂಕೋಲಾದವಾರದ ರವಿ ಶೆಟ್ಟಿಯವರು ಯು ಮುಂಬಾ ತಂಡವನ್ನು ಕಳೆದ 5 ಆವೃತ್ತಿಗಳಲ್ಲಿ 1 ಬಾರಿ ಚಾಂಪಿಯನ್‌, 2 ಬಾರಿ ರನ್ನರ್ಸ್‌ ಅಪ್‌ಗೆàರಿಸಿದ ಹೆಗ್ಗಳಿಕೆಯಿದೆ. 
ಉಡುಪಿ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ವತಿಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ತರಬೇತಿ ಶಿಬಿರಕ್ಕೆ ತರಬೇತುದಾರರಾಗಿ ಆಗಮಿಸಿದ್ದು, ಈ ವೇಳೆ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ. 

ಕಬಡ್ಡಿಯನ್ನು ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ಗೆ ಸೇರಿಸಲು ಏನೆಲ್ಲ ಬೆಳವಣಿಗೆಗಳು ನಡೆದಿವೆ ?
         ಒಲಿಂಪಿಕ್ಸ್‌ ಹಾಗೂ ಕಾಮನ್‌ವೆಲ್ತ್‌ ನಂತಹ ಕ್ರೀಡಾಕೂಟದಲ್ಲಿ ಯಾವುದೇ ಆಟವನ್ನು ಅಳವಡಿಸಲು ಕನಿಷ್ಠ ಆ ಕ್ರೀಡೆಯನ್ನು 50 ದೇಶಗಳಾದರೂ ಪ್ರತಿನಿಧಿಸುವಂತಿರಬೇಕು. ಆದರೆ ಸದ್ಯ ಕಬಡ್ಡಿ ಆಡುವ ದೇಶಗಳ ಸಂಖ್ಯೆ 32 ಮಾತ್ರವಿದೆ. ಈ ಬಗ್ಗೆ ಸ್ವತಹ ಭಾರತೀಯ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಶ್ರಮ ವಹಿಸುತ್ತಿದ್ದು, ಬೇರೆ ಬೇರೆ ದೇಶಗಳಿಗೆ ಇಲ್ಲಿನ ತರಬೇತುದಾರರನ್ನು ಕಳುಹಿಸಿ, ಆ ದೇಶಗಳಲ್ಲಿ ಕಬಡ್ಡಿ ತಂಡಗಳನ್ನು ತಯಾರು ಮಾಡುತ್ತಿದೆ. ಆ ಮೂಲಕ ಕಬಡ್ಡಿ ಕ್ರೀಡೆಗೆ ಇನ್ನಷ್ಟು ಉತ್ತೇಜನ ನೀಡುತ್ತಿದೆ. 2020 ರಲ್ಲಿ ಸಾಧ್ಯವಾಗದಿದ್ದರೂ, 2024 ರಲ್ಲಿ ಕಬಡ್ಡಿ ಒಲಿಂಪಿಕ್ಸ್‌ನಲ್ಲಿ ಇರಲಿದೆ ಎನ್ನುವ ವಿಶ್ವಾಸವಿದೆ. 

ಕಬಡ್ಡಿಗೆ ಈಗ ಹಿಂದಿಗಿಂತ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿದೆ ಅಲ್ಲವೇ?
         ಹೌದು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈಗ ಕಬಡ್ಡಿ ಬೇರೆಲ್ಲ ಕ್ರೀಡೆಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ವೀಕ್ಷಕರ ಸಂಖ್ಯೆಯೂ ಜಾಸ್ತಿಯಿದೆ. ಅದರಲ್ಲೂ ಪ್ರೊ| ಕಬಡ್ಡಿಯನ್ನು ಟಿವಿಯಲ್ಲಿ ವೀಕ್ಷಿಸುವವರ ಸಂಖ್ಯೆಯಲ್ಲಿ ಕರಾವಳಿ ಭಾಗವೇ ಮೊದಲ ಸ್ಥಾನದಲ್ಲಿದೆ. ಪ್ರೊ| ಕಬಡ್ಡಿಯಿಂದಾಗಿ ಕ್ರಿಕೆಟ್‌ನಷ್ಟೇ ಮಹತ್ವ ದೊರೆತಿದೆ. 

ನಿಮ್ಮ ಪ್ರಕಾರ ದೇಶದ ಈಗಿನ ಉತ್ತಮ ಕಬಡ್ಡಿ  ಪಟು ಯಾರು? 
         ನನ್ನ ನೆಚ್ಚಿನ ಆಟಗಾರ ಅನೂಪ್‌ ಕುಮಾರ್‌ ಆಗಿದ್ದು, ಶಾಂತಚಿತ್ತತೆ, ಕೋಚ್‌ಗೆ ಕೊಡುವ ಗೌರವ, ರೈಡಿಂಗ್‌ನಲ್ಲಿರುವ ಎಸ್ಕೆಪಿಂಗ್‌ ಆತನ ಪ್ಲಸ್‌ ಪಾಯಿಂಟ್‌. ಇನ್ನು ಸುರ್ಜಿತ್‌, ಅಜಯ್‌ ಠಾಕೂರ್‌, ರಾಹುಲ್‌ ಚೌಧರಿ ಹೀಗೆ ಸಾಕಷ್ಟು ಪ್ರತಿಭಾವಂತ ಆಟಗಾರರು ದೇಶದಲ್ಲಿದ್ದಾರೆ. 

Advertisement

ಕಬಡ್ಡಿಗೆ ಸರಕಾರ ಒಳ್ಳೆಯ ಪ್ರೋತ್ಸಾಹ ನೀಡುತ್ತಿದೆಯೇ?
          ಹೌದು. ಮೊದಲಿಗಿಂತ ಈಗ ಸರಕಾರ ಕಬಡ್ಡಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದೆ. ಮೊದಲು ವಿಶ್ವಕಪ್‌ ತಂಡದಲ್ಲಿದ್ದ ಸದಸ್ಯರಿಗೆ ಮಾಸಿಕ 7 ಸಾವಿರ ರೂ. ನೀಡುತ್ತಿದ್ದರೆ, ಈಗ ಅದನ್ನು 20 ಸಾವಿರ ರೂ. ಗೆ ಏರಿಸಿದೆ. ಇದು ಒಳ್ಳೆಯ ಬೆಳವಣಿಗೆ. 

ಕಬಡ್ಡಿ ಆಟದಲ್ಲಿ ಏನೆಲ್ಲ ಸುಧಾರಣೆ ಆಗಬೇಕಾಗಿದೆ?
          ಪುರುಷರ (13/10) ಹಾಗೂ ಮಹಿಳಾ (11/8) ಕಬಡ್ಡಿ ಆಟದ ಅಂಗಣದಲ್ಲಿ ವ್ಯತ್ಯಾಸಗಳಿದ್ದು, ಇದು ಒಂದೇ ತೆರನಾದ ಕೋರ್ಟ್‌ ನಿರ್ಮಿಸಿದರೆ ಒಳಿತು. 11/9 ಸುತ್ತಳತೆಯ ಅಂಗಣ ನಿರ್ಮಿಸಿದರೆ ಮಹಿಳೆಯರು ಹಾಗೂ ಪುರುಷರನ್ನು ಸಮಾನವಾಗಿ ಕಾಣಬಹುದು. ಪ್ರಶಸ್ತಿ, ಹಣದ ವಿಚಾರದಲ್ಲಿಯೂ ಸಾಕಷ್ಟು ತಾರತಮ್ಯಗಳಿದ್ದು, ಅದು ಸಮಾನವಾಗಬೇಕಿದೆ. 

ಆಟಗಾರ ನಿರಂತರ ಫಿಟ್‌ನೆಸ್‌ಗಾಗಿ ಏನು ಮಾಡಬೇಕು?
         ಆಟಗಾರನಿಗೆ ಮುಖ್ಯವಾಗಿ ಬೇಕಾದದ್ದು ಶಿಸ್ತು, ಶ್ರದ್ಧೆ. ಅದಿದ್ದರೆ ಖಂಡಿತ ಆತ ಯಶಸ್ವಿಯಾಗುತ್ತಾನೆ. ಆಹಾರದಲ್ಲೂ ಎಚ್ಚರಿಕೆ ವಹಿಸುವುದು ಅತೀ ಅಗತ್ಯ. ಹರ್ಯಾಣದ ಆಟಗಾರರೆಲ್ಲ ಮೊಟ್ಟೆ ಹಾಗೂ ಹಸಿ ಹಾಲನ್ನು ಮಾತ್ರ ತರಬೇತಿ ಅವಧಿಯಲ್ಲಿ ಸೇವಿಸುತ್ತಾರೆ. ಹಾಗಾಗಿ ಅವರ ಫಿಟ್‌ನೆಸ್‌ ಕೂಡ ಉತ್ತಮವಾಗಿದೆ.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next