Advertisement

U-19 ವಿಶ್ವಕಪ್‌ ಕ್ರಿಕೆಟ್‌: ಭರವಸೆ ಮೂಡಿಸಿದ ಭವಿಷ್ಯದ ತಾರೆಯರು

12:11 AM Feb 24, 2024 | Team Udayavani |

2 ವಾರಗಳ ಹಿಂದೆ ಅಂತ್ಯಗೊಂಡ 2024ರ ಯು – 19 ವಿಶ್ವಕಪ್‌ ಪಂದ್ಯಾವಳಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ಫೈನಲ್‌ಗೇರಿದ್ದ ಯಂಗ್‌ ಇಂಡಿಯಾ ಪ್ರಶಸ್ತಿ ಸುತ್ತಿನಲ್ಲಿ ಎಡವಿ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಸೋಲು- ಗೆಲುವನ್ನು ಪಕ್ಕಕ್ಕಿಟ್ಟು ನೋಡಿದಾಗ ಈ ಪಂದ್ಯಾವಳಿ, ಕಿರಿಯರಿಗೆ ತಮ್ಮ ಪ್ರತಿಭೆಯನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸಲು ವೇದಿಕೆಯಾಯಿತು ಎನ್ನುವುದನ್ನು ಮರೆಯುವಂತಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ವಿವಿಧ ದೇಶಗಳ ಅನೇಕ ಕಿರಿಯ ಆಟಗಾರರು ಆ ದೇಶಗಳ ಹಿರಿಯರ ತಂಡದ ಬಾಗಿಲ ಸಮೀಪ ತಲುಪಿದ್ದಾರೆನ್ನಬಹುದು. ಇದರಲ್ಲಿ ನಮ್ಮ ಭಾರತದ ಆಟಗಾರರೂ ಹಿಂದೆ ಬಿದ್ದಿಲ್ಲ. ಯಂಗ್‌ ಇಂಡಿಯಾದ ಹಲವರು ಪಂದ್ಯಾವಳಿಯ ಉದ್ದಕ್ಕೂ ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ಮೂಡಿಸಿದ್ದಾರೆ.

Advertisement

ಮುಶೀರ್‌ ಖಾನ್‌
ಮುಂಬಯಿಯ 18 ವರ್ಷದ ಈ ಬ್ಯಾಟಿಂಗ್‌ ಆಲ್‌ರೌಂಡರ್‌ ಯು 19ಯಲ್ಲಿ ಮಿಂಚಿದ ಭಾರತದ ಮತ್ತೋರ್ವ ಪ್ರತಿಭೆ. ತಮ್ಮ ಆಕ್ರಮಣಕಾರಿ ಹಾಗೂ ಸ್ಥಿರ ಪ್ರದರ್ಶನದ ಮೂಲಕ ತಂಡದ ಅನೇಕ ಗೆಲುವಲ್ಲಿ ಖಾನ್‌ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ತಮ್ಮ ಆಫ್ ಸ್ಪಿನ್‌ ಬೌಲಿಂಗ್‌ ಮೂಲಕ 7 ವಿಕೆಟ್‌ ಕಿತ್ತು ತಂಡಕ್ಕೆ ನೆರವಾಗಿದ್ದರು. ಐರ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧ ಕ್ರಮವಾಗಿ 118, 131 ರನ್‌ ಬಾರಿಸಿ ಯು 19ನ ಒಂದೇ ಪಂದ್ಯಾವಳಿಯಲ್ಲಿ ಎರಡು ಶತಕ ಬಾರಿಸಿದ ಭಾರತದ ಎರಡನೇ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. (ಈ ಸಾಧನೆ ಮಾಡಿದ ಮೊದಲ ಆಟಗಾರ ಶಿಖರ್‌ ಧವನ್‌). 7 ಪಂದ್ಯಗಳಿಂದ ಮುಶೀರ್‌ 360 ರನ್‌ ಹಾಗೂ 7 ವಿಕೆಟ್‌ ಗಳಿಸಿದ್ದರು.

ಉದಯ್‌ ಸಹಾರಣ್‌
ರಾಜಸ್ಥಾನದ 19 ವರ್ಷದ ಬ್ಯಾಟರ್‌ ಉದಯ್‌ ಸಹಾರಣ್‌ಗೆ ತಂಡದ ನಾಯಕತ್ವ ನೀಡಲಾಗಿತ್ತು. ಈ ಜವಾಬ್ದಾರಿಯನ್ನು ಉದಯ್‌ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದಕ್ಕೆ ದಕ್ಷಿಣ ಆಫ್ರಿಕಾ ತಂಡದ ಎದುರಿನ ಸೆಮಿಫೈನಲ್‌ ಪಂದ್ಯ ಉತ್ತಮ ನಿದರ್ಶನ. ದಕ್ಷಿಣ ಆಫ್ರಿಕಾದ 244 ರನ್‌ಗಳಿಗೆ ಜವಾಬು ನೀಡುವ ವೇಳೆ 34 ರನ್‌ಗಳಿಗೆ 4 ವಿಕೆಟ್‌ ಬಿದ್ದಾಗ ಭಾರತದ ಫೈನಲ್‌ ಕನಸು ಕಮರಿತೆಂದೇ ಭಾವಿಸಲಾಗಿತ್ತು. ಆದರೆ ನಾಯಕನ ಆಟವಾಡಿದ ಉದಯ್‌ ತನ್ನ ಜತೆಗಾರ ಸಚಿನ್‌ ಧಾಸ್‌ರೊಂದಿಗೆ ಸೇರಿ 172 ರನ್‌ ಜತೆಯಾಟದ ಮೂಲಕ ತಂಡವನ್ನು ಗೆಲುವಿನ ಹಳಿಗೆ ತಂದಿದ್ದರು. ಪಂದ್ಯಾವಳಿಯಲ್ಲಿ 7 ಪಂದ್ಯಗಳನ್ನು ಆಡಿದ ಸಹಾರಣ್‌ 56.71ರ ಸರಾಸರಿಯಲ್ಲಿ ಒಂದು ಶತಕ ಸಹಿತ 397 ರನ್‌ ಗಳಿಸಿ ಅಗ್ರಸ್ಥಾನದಲ್ಲಿದ್ದರು.

ಸಚಿನ್‌ ಧಾಸ್‌
ಯು -19ನಲ್ಲಿ ಮಿಂಚಿದ ಮತ್ತೂಬ್ಬ ಪ್ರತಿಭೆ ಮಹಾರಾಷ್ಟ್ರದ ಸಚಿನ್‌ ಧಾಸ್‌. ತಂಡದ ಮಧ್ಯಮ ಕ್ರಮಾಂಕದ ಬಲವಾಗಿದ್ದ ಧಾಸ್‌ ಆಪತ್ಭಾಂಧವರಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ತಂಡ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ದಾಸ್‌ ಜವಾಬ್ದಾರಿಯುತವಾಗಿ ಬ್ಯಾಟ್‌ ಬೀಸಿದ್ದರು. ಈ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನದಲ್ಲಿ ದಾಸ್‌ 96 ಎಸೆತಗಳಿಂದ 95 ರನ್‌ ಬಾರಿಸಿ ಜಯದ ರೂವಾರಿಯಾಗಿದ್ದರು. ಪಂದ್ಯಾವಳಿಯಲ್ಲಿ 60.60ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿರುವ ದಾಸ್‌ ಒಂದು ಶತಕ ಸಹಿತ 303 ರನ್‌ ಕೊಡುಗೆ ನೀಡಿದ್ದರು.

ಸೌಮ್ಯಕುಮಾರ್‌ ಪಾಂಡೆ
ಪಂದ್ಯಾವಳಿಯ ಆರಂಭದ ಪಂದ್ಯದಲ್ಲೇ 4 ವಿಕೆಟ್‌ ಪಡೆದು ಬಾಂಗ್ಲಾ ಬ್ಯಾಟರ್‌ಗಳಿಗೆ ಘಾತಕವಾಗಿ ಪರಿಣಮಿಸಿದ ತಂಡದ ಸ್ಪಿನ್‌ ಬಲವಾಗಿದ್ದವರು ಸೌಮ್ಯಕುಮಾರ್‌ ಪಾಂಡೆ. ನಿರ್ಣಯಕ ಹಂತದಲ್ಲಿ ವಿಕೆಟ್‌ ಕೆಡವುವ ಚಾಕಚಕ್ಯ ಹೊಂದಿರುವ ಮಧ್ಯಪ್ರದೇಶದ ಪಾಂಡೆ ಏಳು ಪಂದ್ಯಗಳಿಂದ 18 ವಿಕೆಟ್‌ ಗಳಿಸಿ, ಪಂದ್ಯಾವಳಿಯಲ್ಲಿ ಎರಡನೇ ಅತೀ ಹೆಚ್ಚು ವಿಕೆಟ್‌ ಪಡೆದ ಸಾಧನೆಗೈದಿದ್ದಾರೆ.

Advertisement

ರಾಜ್‌ ಲಿಂಬಾನಿ
ತಮ್ಮ ವೇಗದ ಬೌಲಿಂಗ್‌ ಮೂಲಕ ಎದುರಾಳಿಯ ಎದೆಯಲ್ಲಿ ಭಯ ಮೂಡಿಸಿದ ಆಟಗಾರ ರಾಜ್‌ ಲಿಂಬಾನಿ. ಇನ್ನಿಂಗ್ಸ್‌ ಆರಂಭದಲ್ಲಿಯೇ ದಾಳಿಗೆ ಇಳಿಯುತ್ತಿದ್ದ ಲಿಂಬಾನಿ ನಿರ್ಣಾಯಕ ವಿಕೆಟ್‌ಗಳನ್ನು ಪಡೆದು ತಂಡಕ್ಕೆ “ಅರ್ಲಿ ಬ್ರೇಕ್‌’ ಒದಗಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 6 ಪಂದ್ಯಗಳಿಂದ 11 ವಿಕೆಟ್‌ ಗಳಿಸಿರುವ ಲಿಂಬಾನಿ ಭರವಸೆಯ ಫಾಸ್ಟ್‌ ಬೌಲರ್‌ ಆಗಿದ್ದಾರೆ.

ಐಸಿಸಿ ಯು-19 ಟೀಮ್‌ ಆಫ್ ಟೂರ್ನಮೆಂಟ್‌
ಲುವಾನ್‌ ಡ್ರೆ ಪ್ರಿಟೊರಿಯಸ್‌ (ಆ), ಹ್ಯಾರಿ ಡಿಕ್ಸನ್‌ (ಆ), ಮುಶೀರ್‌ ಖಾನ್‌ (ಭಾ),
ಹಗ್‌ ವೈಬೆjನ್‌(ಆ), ಉದಯ್‌ ಸಹಾರಣ್‌ (ಭಾ), ಸಚಿನ್‌ ಧಾಸ್‌(ಭಾ), ನಾಥನ್‌ ಎ
ಡ್ವರ್ಡ್‌(ವೆಸ್ಟ್‌ ಇಂಡೀಸ್‌), ಕ್ಯಾಲಮ್‌ ವಿಡ್ಲರ್‌(ಆ), ಉಬೈನ್‌ ಶಾ (ಪಾ), ಕ್ವೆನಾ ಮಫ‌ಕಾ(ದಕ್ಷಿಣ ಆಫ್ರಿಕಾ), ಸೌಮ್ಯಕುಮಾರ್‌ ಪಾಂಡೆ(ಭಾ),ಜೇಮೀ ಡಂಕ್‌(ಸ್ಕಾಟ್ಲೆಂಡ್‌)

ಸುಶ್ಮಿತಾ, ನೇರಳಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next