ಸಾವರ್ (ಬಾಂಗ್ಲಾದೇಶ): ಹಿರಿಯರ 14ನೇ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಬಾಂಗ್ಲಾದೇಶ ಹಾಗೂ ಯುಎಇಯಲ್ಲಿ ಆರಂಭಗೊಂಡ ಅಂಡರ್-19 ಏಶ್ಯ ಕಪ್ ಕ್ರಿಕೆಟ್ ಕೂಟದ ತನ್ನ ಮೊದಲ ಪಂದ್ಯದಲ್ಲಿ ಭಾರತ 171 ರನ್ನುಗಳ ಭಾರೀ ಅಂತರದಿಂದ ನೇಪಾಲವನ್ನು ಮಣಿಸಿದೆ.
ಶನಿವಾರ ನಡೆದ “ಎ’ ವಿಭಾಗದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 9 ವಿಕೆಟಿಗೆ 304 ರನ್ ಪೇರಿಸಿದರೆ, ನೇಪಾಲ 36.5 ಓವರ್‌ಗಳಲ್ಲಿ 133ಕ್ಕೆ ಕುಸಿಯಿತು.
ಆರಂಭಕಾರ ಯಶಸ್ವಿ ಜೈಸ್ವಾಲ್ ಅವರ ಶತಕ (104), ಕೀಪರ್ ಸಿಮ್ರಾನ್ ಸಿಂಗ್ ಅವರ ಬಿರುಸಿನ ಆಟ (82) ಭಾರತದ ಸರದಿಯ ವೈಶಿಷ್ಟéವಾಗಿತ್ತು. ಜೈಸ್ವಾಲ್ 113 ಎಸೆತ ಎದುರಿಸಿ 104 ರನ್ ಹೊಡೆದರು. ಸಿಡಿಸಿದ್ದು 8 ಬೌಂಡರಿ ಹಾಗೂ 5 ಸಿಕ್ಸರ್. ಸಿಮ್ರಾನ್ 61 ಎಸೆತಗಳಿಂದ 82 ರನ್ ಬಾರಿಸಿದರು. ಇದರಲ್ಲಿ 6 ಫೋರ್, 3 ಸಿಕ್ಸರ್ ಸೇರಿತ್ತು.
ಅನನುಭವಿ ನೇಪಾಲ ಯಾವ ಹಂತದಲ್ಲೂ ಭಾರತಕ್ಕೆ ಸಾಟಿಯಾಗಲಿಲ್ಲ. 25 ರನ್ ಹೊಡೆದ ನಾಯಕ ಆಸಿಫ್ ಶೇಖ್ ಅವರದೇ ಹೆಚ್ಚಿನ ಗಳಿಕೆ. ಭಾರತದ ಪರ ಹರ್ಷ್ ತ್ಯಾಗಿ ಮತ್ತು ಸಿದ್ಧಾರ್ಥ್ ದೇಸಾಯಿ ತಲಾ 3 ವಿಕೆಟ್ ಕಿತ್ತರು.ಭಾರತ ರವಿವಾರ ಯುಎಇ ವಿರುದ್ಧ ಹಾಗೂ ಮಂಗಳವಾರ ಅಫ್ಘಾನಿಸ್ಥಾನ ವಿರುದ್ಧ ಆಡಲಿದೆ.
ರಾಹುಲ್ ದ್ರಾವಿಡ್ ಗೈರು
ಈ ಪಂದ್ಯಾವಳಿಯಲ್ಲಿ ಭಾರತ ತಂಡ ಕೋಚ್ ರಾಹುಲ್ ದ್ರಾವಿಡ್ ಸೇವೆಯಿಂದ ವಂಚಿತವಾಗಿದೆ. ಅವರು ಭಾರತ “ಎ’ ತಂಡದೊಂದಿಗೆ ಕರ್ತವ್ಯ ನಿಭಾಯಿಸುತ್ತಿರುವುದೇ ಇದಕ್ಕೆ ಕಾರಣ. ದ್ರಾವಿಡ್ ಬದಲು ಡಬ್ಲ್ಯು.ವಿ. ರಾಮನ್ ಅಂಡರ್-19 ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಯಶಸ್ವಿ ಜೈಸ್ವಾಲ್.