75ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮನೆಗೂ ಜೀಪುಗಳು ಬರುತ್ತಿದ್ದುವಂತೆ. ಜೀಪಿನ ಸದ್ದು ಕೇಳಿದೊಡನೆ ಮನೆ ಯಜಮಾನ ಪರಾರಿ. ಇಷ್ಟಕ್ಕೂ ಜೀಪು ಪೊಲೀಸಿನವರದಲ್ಲ. ಆಸ್ಪತ್ರೆಯ ಜೀಪದು!
ಮಾತುಕತೆ ಅವರ ನಡುವೆಯೇ ನಡೆದಿತ್ತು. 1970 ದಶಕದಲ್ಲಿ ತಾವು ರಿಕ್ಷಾ ತಗೊಂಡಿದ್ದು ಅಂದ ಕೂಡಲೇ ನನ್ನ ಕಿವಿ ನೆಟ್ಟಗಾಯ್ತು. 75ರ ತುರ್ತು ಪರಿಸ್ಥಿತಿ ಹೇಗಿತ್ತು ಕೇಳಬೇಕೆನಿಸಿತು. ಕೇಳಿದ್ದೇ ತಡ: ಉದುರಿತು ನೋಡಿ. ನೇರವಾಗಿ ತುರ್ತುಪರಿಸ್ಥಿತಿಯೇ ಅಲ್ಲವಾದರೂ ಆಚೀಚಿಗಿನ ಕೆಲವು ಘಟನೆಗಳು ಬಂದುಬಿಟ್ಟವು. ಆ ಕಾಲದಲ್ಲಿ, ಹೇಳದೆ ಕೇಳದೆ ಮನೆ ಮನೆಗೂ ಜೀಪು ಬರುತ್ತಿದ್ದುವಂತೆ. ಜೀಪಿನ ಸದ್ದು ಕೇಳಿದೊಡನೆ ಮನೆ ಯಜಮಾನ ಪರಾರಿ. ಇಷ್ಟಕ್ಕೂ ಜೀಪು ಪೊಲೀಸಿನವರದಲ್ಲ. ಆಸ್ಪತ್ರೆಯ ಜೀಪದು. ಜನಸಂಖ್ಯೆಯ ನಿಯಂತ್ರಣಕ್ಕಾಗಿ ಸಂತಾನಹರಣ ಚಿಕಿತ್ಸೆ ಕುರಿತು ಪ್ರಚಾರ ನಡೆಸಲು, ಸಾರ್ವಜನಿಕರಿಗೆ ಮಾಹಿತಿ ನೀಡಲು ಬರುತ್ತಿದ್ದ ಆಸ್ಪತ್ರೆ ಜೀಪು. ನೂರು ರುಪಾಯಿಯ ಆಸೆಗೆ ಕೆಲವರು ಮಾಡಿಸಿಕೊಂಡಿದ್ದರಂತೆ. ಹಲವರಿಗದು ಹೆದರಿಕೆ. ಹಾಗಾಗಿ ಅಡಗಿಯೇ ಕೂರುತ್ತಿದ್ದರಂತೆ.
ನನಗೆ ಮತ್ತಷ್ಟು ಕುತೂಹಲವಾದದ್ದು ಪಾಕಿಸ್ತಾನ, ಭಾರತದ ಯುದ್ಧದ ನೆನಪು. ಅದನ್ನು ರಾಮ- ಲಕ್ಷ್ಮಣರು ಹೇಳಲು ಹೊರಟಾಗಲೇ ನಡುವೆ ಬಾಯಿ ಹಾಕಿದ್ದು ನನ್ನ ತಂದೆ. ಪಾಕಿಸ್ತಾನ ಅಲ್ಲ, ಬಾಂಗ್ಲಾದೇಶ ಅಂತ. ಅಲ್ಲಿಗೆ ಬಾಂಗ್ಲಾ ವಿಮೋಚನೆಯ ಹೋರಾಟದ ಕತೆಯೂ ಆರಂಭವಾಯಿತು. ಆಗ ನನ್ನ ತಂದೆ ಬಾಂಬೆ ಹೊಟೇಲೊಂದರಲ್ಲಿ ಕೆಲಸಕ್ಕಿದ್ದರಂತೆ. ಅದೇ ಸಮಯದಲ್ಲಿ ರಾಮ- ಲಕ್ಷ್ಮಣರು ಪೂನಾದಲ್ಲಿದ್ದರಂತೆ. ಪಾಕಿಸ್ತಾನವೋ, ಬಾಂಗ್ಲಾದೇಶವೋ… ಒಟ್ಟಿನಲ್ಲಿ ಇವರಿಗೂ ನೆಮ್ಮದಿ ಇರಲಿಲ್ಲವಂತೆ. ರಾತ್ರಿ ಹೊತ್ತು ಬೆಳಕಿಲ್ಲ. ಬೆಂಕಿ ಹಾಕೋಕೂ ಏನೂ ಇಲ್ಲ. ಕಡೆಗೆ ಬೀಡಿ ಸೇದೋರನ್ನೂ ಹೊಡೆದು ಓಡಿಸುತ್ತಿದ್ದರಂತೆ. ಬೆಂಕಿ, ಬೆಳಕು, ಹೊಗೆ ಕಂಡಲ್ಲಿ ಬಾಂಬು ಬೀಳುತ್ತೆ ಅಂತ ಹೆದರಿಕೆ. ಇಂಡಿಯಾದವರಿಗೆ ಅದೆಷ್ಟು ಹೆದರಿಕೆಯಲ್ವೇ ಅಂದರು ತಂದೆ. ಮತ್ತೆ ಜೀವ ಹೋಗುತ್ತೆ ಅಂದ್ರೆ ಖುಷಿಯಲ್ಲಿರೋಕಾಗುತ್ತಾ ಅಂದರು ಅವಳಿಗಳಲ್ಲೊಬ್ಬರು.ಅವರ ಮಾತು ಮುಂದುವರಿದಂತೆ ಕುತೂಹಲ ಹೆಚ್ಚಾದರೂ ನನಗೆ ಗಾಬರಿಯಾಯಿತು. ಟೈರಿಗೆ ಸಣ್ಣ ಮೊಳೆಯೊಂದು ಚುಚ್ಚಿತ್ತಂತೆ. ಅದನ್ನು ಕಿತ್ತೆಸೆದಿದ್ದಾರೆ. ಪ್ಯಾಚ್ ಹಾಕಿ ಟ್ಯೂಬನ್ನು ಟೈರೊಳಗೆ ತುರುಕಿಸಿ ಸೈಕಲ್ ಪಂಪಿನಿಂದ ಗಾಳಿಯನ್ನು ಹಾಕುತ್ತಿದ್ದಾರೆ. ಅದೆಷ್ಟು ಸಲ ಹೊಡೆದರೂ ಗಾಳಿ ತುಂಬುತ್ತಿಲ್ಲ. ಒಳಗೆ ಹೋಗುತ್ತಿದ್ದ ಗಾಳಿಯೂ ಮಾತಿನ ನಡುವೆ ಒಮ್ಮೆ ಜೋರಾಗಿ ಠುಸ್ ಅಂದು ಬಿಡು¤. ವಾಲ್ ಪಿನ್ನನ್ನು ಹಾಕದೇ ಗಾಳಿ ಹೊಡೆದರೆ ಇನ್ನೇನಾಗಬೇಕು. ಅಷ್ಟು ಮೈಮರೆತಿದ್ದರು ಅವರು ಗತಕಾಲದ ಮಾತಿನಲ್ಲಿ. ಅಣ್ಣ ತಮ್ಮಂದಿರಿಬ್ಬರೂ ತಮ್ಮ ಮೂರ್ಖತನಕ್ಕಾಗಿ ನಕ್ಕು ಪರಸ್ಪರ ಬೈದುಕೊಂಡರು. ನನ್ನ ತಂದೆಯಂತೂ ಗಾಂಪರೊಡೆಯರ ಕಥೆಯನ್ನೇ ನೆನಪು ಮಾಡಿಕೊಂಡುಬಿಟ್ಟರು. ನಾಗು ಒಬ್ಬನಿದ್ದ, ಅವರು ಏನೇ ಹೇಳಿದರೂ ಹೂಂಗುಡೋಕೆ ಹಾಗೂ ಜೋರಾಗಿ ನಗೋಕೆ. ಗಾಳಿ ಹೋದ ಸದ್ದಿನೊಡನೆ ಒಮ್ಮೆಗೆ ಎಲ್ಲವೂ ನಿಂತು ಹೋಯ್ತು. ಬರೇ ಮೌನ. ಪಿನ್ನನ್ನು ಹಾಕಿ ಗಾಳಿ ಮತ್ತೆ ಹೊಡೆಯಲಾಯಿತು. ಟೈರು ಊದಿಕೊಂಡಿತು. ಬುಲೆಟ್ಟಿನ ಬುಡ ಸೇರಿತು. ಎಲ್ಲವೂ ಸರಿಯಾದಂತೆ ಸ್ವಲ್ಪ ಹೊತ್ತು ಹೊಟ್ಟೆಯೊಳಗೇ ಅಡಗಿ ಹೋದ ಮಾತುಗಳು ಮತ್ತೆ ಶುರುವಾದವು.
ಬಾಂಗ್ಲಾ ಯುದ್ಧವಾಗುತ್ತಿದ್ದಾಗ ತಮ್ಮೂರಿನಿಂದಲೂ ಲೋಡುಗಟ್ಟಲೆ ಅಕ್ಕಿ, ಆಹಾರಗಳೆಲ್ಲಾ ಅಲ್ಲಿಗೆ ಹೋಗುತ್ತಿದ್ದವಂತೆ. ನಮ್ಮ ದುಡಿಮೆ ಎಲ್ಲಾ ಬಾಂಗ್ಲಾದ ಪಾಲು. ಈಗ ಅವರಿಗದೆಲ್ಲ ನೆನಪುಂಟಾ? ನಮ್ಮ ಮೇಲೇನೇ ಬರುತ್ತಾರೆ ಈಗ. ಅವರಿಗೆಲ್ಲಾ ಕೃತಜ್ಞತೆ ಎಂಬುದೇ ಗೊತ್ತಿಲ್ಲ ಎಂದರು ಕೋಪದಿಂದ ಕುದಿಯುತ್ತಿದ್ದ ನನ್ನ ತಂದೆ. ಅವರು ಆ ಕಾಲಕ್ಕೆ ಥಿಯೇಟರಿಗೆ ಬಂದ “ಜೈ ಬಾಂಗ್ಲಾದೇಶ್’ ಸಿನಿಮಾ ಕತೆಯನ್ನೂ ಹೇಳಿದರು. ಅಷ್ಟೊತ್ತಿಗೆ ಟೈರನ್ನು ಸಿಕ್ಕಿಸಿ ರಾಮ ಲಕ್ಷ್ಮಣರಿಬ್ಬರೂ ಕೈ ತೊಳೆದು ಬಂದರು. ಪಿಚ್ಚರಿನವರಿಗೇನು? ಅವರಿಗೆ ಹಣ ಮಾಡುವುದೊಂದೇ ಧ್ಯಾನ. ಇನ್ನು ನೋಡಿ ಭಾಸ್ಕರ ಶೆಟ್ರ ಪಿಚ್ಚರೂÅ ಬರುತ್ತೆ. ಎಲ್ಲಾ ಲಾಟ್‌ಪೊಟ್ಟು ಮಾರ್ರೆ ಎನ್ನುತ್ತಾ ಅಮ್ಮ ಮಾಡಿಟ್ಟಿದ್ದ ಚಹಾ ಕುಡಿದು, ನೂರು ರುಪಾಯಿ ಕೇಳಿ ಪಡೆದು, ಆಟೋ ಹತ್ತಿ ಹೊರಟು ಹೋದರು ಅವಳಿಗಳಿಬ್ಬರೂ. ಈ ನಡುವೆ ಶಸ್ತ್ರಚಿಕಿತ್ಸೆ ಆಸ್ಪತ್ರೆ ಜೀಪಿನವರ ಆಮಿಷಕ್ಕೆ ಬಲಿಯಾಗಿ ಆಪರೇಷನ್ ಮಾಡಿಸಿಕೊಂಡವರ ಹೆಸರುಗಳು ನಾಗುವಿನ ಬಾಯಲ್ಲಿ ಬಂದು ಹೋಯ್ತು. ಭೂ ಸುಧಾರಣೆಯ ಕಾಲದಲ್ಲಿ ನಮ್ಮೂರ ಕಾಂಗ್ರೆಸ್ ನಾಯಕ ಕುಟ್ಟಿ ಶೆಟ್ರ ಮನೆ ಕೆಡವಲು ಊರ ಗುತ್ತಿನವರು ಹೊಂಚು ಹಾಕಿದ್ದು. ಆಗ ಮಿಲಿಟರಿಯ ಪಟಾಲಮ್ಮೇ ಬಂದು ಕುಟ್ಟಿ ಶೆಟ್ರಿಗೆ ರಕ್ಷಣೆ ಒದಗಿಸಿದ್ದು. ಹೀಗೆ ಹಲವಾರು ಕತೆಗಳು ಬಂದು ಹೋದವು. ಪಠ್ಯದಲ್ಲಿ ಓದಿದ್ದ ಇತಿಹಾಸದ ಕಥೆಗಳಿಗೆ ನಮ್ಮೂರಿನ ಜನರೇ ಪಾತ್ರಗಳಾಗಿ ಕಣ್ಣ ಮುಂದೆ ಮತ್ತೂಮ್ಮೆ ನಟಿಸಿ ಹೋದಂತಾಯ್ತು ನನಗೆ.
ರಾಮ- ಲಕ್ಷ್ಮಣರು ಬಂದು ಹೋದ ಅರ್ಧ ಗಂಟೆಯಲ್ಲಿ ನಾನು ಅದೆಂತಹಾ ಮೋಡಿಗೊಳಗಾಗಿದ್ದೆನೆಂದರೆ ಇಂತಹ ಮಾತುಗಳು, ಕತೆಗಳು ಕೇಳಲು ಸಿಗುತ್ತವೆ ಎಂದಾದರೆ ಕಾಳಿಂಗನ ಟೈರಿಗೆ ಅದೆಷ್ಟು ಸಲ ಮೊಳೆ ಚುಚ್ಚಿದರೂ ಪರವಾಗಿಲ್ಲ ಅನ್ನಿಸಿತು. ಇವರ ಮಾತುಗಳನ್ನು ಕೇಳಬೇಕು. ನಮ್ಮೂರ ಇತಿಹಾಸವನ್ನೂ ಬರೆಯಬೇಕೆನಿಸಿತು. ಇಲ್ಲ. ಕಾಳಿಂಗನನ್ನು ನಾನು ಮಾರುವುದಿಲ್ಲ. ಅದೆಷ್ಟು ಸಲ ಬಿದ್ದರೂ ಸರಿಯೇ, ಕಷ್ಟ ಕೊಟ್ಟರೂ ಸರಿಯೇ. ನೂರಾರು ಕತೆಗಳನ್ನು ನನಗೆ ಕೇಳಿಸುತ್ತಿರೋ, ತೋರಿಸುತ್ತಿರೋ ಸಾರಥಿಯನ್ನು ಕಳೆದುಕೊಳ್ಳುವುದುಂಟೇ?
ಮಳೆಗಾಲದಲ್ಲಿ ಒಂದು ದಿನ. ಬೆಳ್ತಂಗಡಿಯ ಬಂಗಾಡಿಗೆ ಹೋಗಿದ್ದೆ. ಅಲ್ಲಿಂದ ಕೊಲ್ಲಿ. ರಭಸದಿಂದ ಹರಿವ ನೇತ್ರಾವತಿಯನ್ನು ಕಂಡು ಇನ್ನು ಮರಳುವುದೆಂದಾಗ ಒಬ್ಬ ಅಜ್ಜ ಎದುರಾದರು. ಬುಲೆಟ್ ನಿಂತಿತು. ಅವರನ್ನು “ಬರುತ್ತೀರಾ?’ ಎಂದು ಕೇಳಿದೆ. “ಇಲ್ಲ. ಬೈಕುಗಳೆಂದರೆ ನನಗೆ ಭಯ’ ಎಂದ ಅವರು ಕರುಣಾಜನಕ ಕಥೆಯೊಂದನ್ನು ಹೇಳಲು ಆರಂಭಿಸಿದರು.
(ಮುಂದುವರಿಯುವುದು)
– ಮಂಜುನಾಥ್ ಕಾಮತ್