Advertisement

ಉಡುಪಿ; ಹೃದಯಾಕೃತಿ ಹೆಡೆಯ ನಾಗರಹಾವು ಪತ್ತೆ

10:57 PM Jan 04, 2017 | Team Udayavani |

ಉಡುಪಿ: ಪರ್ಕಳದ ರಾಜೇಶ್‌ ಕೋಟ್ಯಾನ್‌ ಅವರ ಮನೆಯಲ್ಲಿ ವಿಶಿಷ್ಟ ಹೆಡೆಯ ಅಪರೂಪದ ನಾಗರಹಾವು ಪತ್ತೆಯಾಗಿದೆ. ಜ. 2ರಂದು ಮನೆಯೊಳಗೆ ಇಲಿ ಹಿಡಿಯಲು ಬಂದ ಹೆಣ್ಣು ಹಾವಿದು. ಮಾಡಿನಲ್ಲಿ ಇಲಿ ಸಿಗದೆ ಸೌದೆ ಶೇಖರಣೆ ಕೋಣೆಯೊಳಗೆ ಹೊಕ್ಕು ಅಲ್ಲಿನ ಇಲಿಗಳನ್ನು  ಹಿಡಿದು ತಿನ್ನುವ ಧಾವಂತದಲ್ಲಿದ್ದ ಹಾವು ಮನೆಮಂದಿಯ ದೃಷ್ಟಿಗೆ ಬಿದ್ದುದರಿಂದ ತತ್‌ಕ್ಷಣ ಉರಗತಜ್ಞ ಗುರುರಾಜ ಸನಿಲ್‌ರಿಗೆ ಕರೆ ಹೋಯಿತು. ಗುರುರಾಜರು ಕಟ್ಟಿಗೆ ರಾಶಿಯನ್ನು ಹೊರಗೆ ಹಾಕುತ್ತಿದ್ದಾಗ ಹಾವು ಹೊರಹೋಗಲು ಪ್ರಯತ್ನಿಸಿತು. ಅದನ್ನು ಹಿಡಿದಾಗ ಗುರುರಾಜರಿಗೆ ಅಚ್ಚರಿ ಕಾದಿತ್ತು.

Advertisement

ಪ್ರಕೃತಿ ವಿಸ್ಮಯ: ಸುಮಾರು 30 ವರ್ಷಗಳಿಂದ ಹಾವುಗಳ ಒಡನಾಟದಲ್ಲಿರುವ ಗುರುರಾಜರು ಹಿಡಿದ ಹಾವುಗಳ ಸಂಖ್ಯೆ ಸುಮಾರು 20,000. ಅವುಗಳಲ್ಲಿ ಸುಮಾರು 15,000 ನಾಗರಹಾವುಗಳೇ. ಅಷ್ಟು ನಾಗರಹಾವುಗಳಲ್ಲಿ ಈ ರೀತಿಯ ಹೃದಯಾಕೃತಿ ಹೆಡೆ ಗುರುತಿದ್ದ ಹಾವು ಕಾಣಲು ಸಿಕ್ಕಿದ್ದು ಇದೇ ಮೊದಲು. ಸಾಮಾನ್ಯ ನಾಗರಹಾವಿನ ಹೆಡೆಗಿಂತಲೂ ಭಿನ್ನವಾಗಿ ಇದರ ಹೆಡೆ ಇದೆ. ಇದು ಸಾಮಾನ್ಯ ನಾಗರಹಾವೇ. ಆದರೆ ಇದೊಂದು ಪ್ರಕೃತಿ ವಿಸ್ಮಯ.

ಪ್ರದೇಶ, ಹವಾಮಾನ, ಶತ್ರು ಪ್ರಾಣಿಗಳಿಂದ ಆತ್ಮರಕ್ಷಣೆ ಮಾಡಿಕೊಳ್ಳಲು, ಆಹಾರದ ಜೀವಿಗಳನ್ನು ತಿನ್ನಲು ಬಣ್ಣ, ವಿನ್ಯಾಸವನ್ನು ಪ್ರಾಣಿಗಳು ರೂಪಿಸಿಕೊಳ್ಳುತ್ತವೆ ಎಂದು ಅವರು ತಿಳಿಸಿದ್ದಾರೆ. ಇವುಗಳಿಂದ ಇತರ ಪ್ರಾಣಿಗಳಿಂದ ರಕ್ಷಣೆ ಪಡೆದುಕೊಳ್ಳಬಹುದು, ಮನುಷ್ಯರ ಕೈಗೆ ಸಿಕ್ಕಿ ಅಪಾಯಕ್ಕೂ ಸಿಲುಕಬಹುದು ಎನ್ನುತ್ತಾರೆ ಗುರುರಾಜ್‌ ಸನಿಲ್‌.

Advertisement

Udayavani is now on Telegram. Click here to join our channel and stay updated with the latest news.

Next