ಬೆಂಗಳೂರು: ಪುಟ್ಟ ಮಕ್ಕಳಿಂದ ಹಿಡಿದು ವಯೋವದ್ಧರವರೆಗೂ ಹುಚ್ಚು ಹಿಡಿಸಿರುವ ಟಿಕ್ ಟಾಕ್‌ಗೆ ನಗರದಲ್ಲಿ ಇಬ್ಬರು ಯುವಕರು ಬಲಿಯಾಗಿದ್ದಾರೆ. ಶಿವರಾಮ ಕಾರಂತ ಬಡಾವಣೆ ಸಮೀಪದ ಯಲಹಂಕ ಮತ್ತು ಚನ್ನಸಂದ್ರ ರೈಲ್ವೆ ಹಳಿ ಮೇಲೆ ಟಿಕ್‌ಟಾಕ್ ವಿಡಿಯೋ ಮಾಡಲು ಹೋಗಿ ರೈಲಿಗೆ ಸಿಲುಕಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ಹೆಗಡೆ ನಗರದ ನಿವಾಸಿಗಳಾಗಿದ್ದ ಅಫ್ತಾಬ್ (19) ಮತ್ತು ಮೊಹಮ್ಮದ್ ಮತೀನ್ (29) ಎಂಬವರು ಮೃತಪಟ್ಟಿದ್ದು, ಮತ್ತೊಬ್ಬ ಯುವಕ ಜಬೀದುಲ್ಲಾ (22) ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೂವರೂ ಯುವಕರು ಸ್ನೇಹಿತರಾಗಿದ್ದು, ಅಫ್ತಾಬ್ ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನಿಬ್ಬರು ಫುಡ್ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.
ಶುಕ್ರವಾರ ಸಂಜೆ 5.30ರ ಸುಮಾರಿಗೆ ಮೂವರೂ ಯಲಹಂಕ ಮತ್ತು ಚನ್ನಸಂದ್ರ ನಡುವಿನ ಶಿವರಾಮ ಕಾರಂತ ಲೇಔಟ್‌ನ ರೈಲ್ವೆ ಹಳಿ ಸಮೀಪ ಹೋಗಿದ್ದಾರೆ. ಈ ವೇಳೆ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಪ್ಯಾಸೆಂಜರ್ ರೈಲು ಚಲಿಸುವಾಗ ಮೂವರೂ, ಮೊಬೈಲ್‌ನಲ್ಲಿದ್ದ ಟಿಕ್‌ಟಾಕ್ ಆ್ಯಪ್‌ನಲ್ಲಿ ವಿಡಿಯೋ ಮಾಡಲು ಮುಂದಾಗಿದ್ದಾರೆ.
ಈ ವೇಳೆ ವೇಗವಾಗಿ ಬರುತ್ತಿದ್ದ ರೈಲು ಯುವಕರಿಗೆ ತಾಗಿದ ರಭಸಕ್ಕೆ ಅಫ್ತಾಬ್ ಮತ್ತು ಮೊಹಮ್ಮದ್ ಮತೀನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಅಫ್ತಾಬ್ ಮೃತದೇಹ ರೈಲ್ವೆ ಹಳಿಯಿಂದ ಸುಮಾರು 100 ಮೀಟರ್ ದೂರಕ್ಕೆ ಹಾಗೂ ಮೊಹಮ್ಮದ್ ಮತೀನ್ ದೇಹ ಸುಮಾರು 20 ಅಡಿ ದೂರಕ್ಕೆ ಹಾರಿ ಬಿದ್ದಿದೆ.
ಅವಘಡದಲ್ಲಿ ತಲೆಗೆ ಪೆಟ್ಟು ಬಿದ್ದಿರುವ ಜಬೀದುಲ್ಲಾ ಸ್ಥಿತಿ ಕೂಡ ಗಂಭೀರವಾಗಿದೆ. ಯುವಕರು ಟಿಕ್‌ಟಾಕ್ ವಿಡಿಯೋ ಮಾಡುವಾಗ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ತಿಳಿಸಿದರು.
ಇತ್ತೀಚೆಗಷ್ಟೇ ತುಮಕೂರಿನಲ್ಲಿ ಯುವಕನೊಬ್ಬ ಟಿಕ್‌ಟಾಕ್ ವಿಡಿಯೋಗಾಗಿ ಜಂಪ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದ. ಆ ಘಟನೆ ನೆನಪು ಮಾಸುವ ಮುನ್ನವೇ ಇದೀಗ ನಗರದಲ್ಲಿ ಇಬ್ಬರು ಯುವಕರು ಅದೇ ಟಿಕ್‌ಟಾಕ್ ವಿಡಿಯೋ ಮಾಡಲು ಹೋಗಿ ಮೃತಪಟ್ಟಿದ್ದಾರೆ.