Advertisement

ಮನೋಜ್ಞ ಅವಳಿ ಪ್ರಸಂಗಗಳು

06:09 PM Nov 07, 2019 | mahesh |

ಉಡುಪಿ ಪುತ್ತೂರು ಭಗವತಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀ ಭಗವತಿ ಹವ್ಯಾಸಿ ಯಕ್ಷ ಬಳಗ ಪುತ್ತೂರು ಇವರು “ಲಂಕಿಣಿ ಮೋಕ್ಷ’ ಮತ್ತು “ಗರುಡ ಗರ್ವಭಂಗ’ ಎಂಬ ಪ್ರಸಂಗವನ್ನು ಪ್ರದರ್ಶಿಸಿದರು. ಶ್ರೀ ರಾಮ ( ಸಮರ್ಥ) ಮತ್ತು ಲಕ್ಷ್ಮಣ (ವನ್ಯಶ್ರೀ) ಶಾಸ್ತ್ರೀಯವಾದ ಒಡ್ಡೋಲಗದ ಕುಣಿತ , ಉತ್ತಮ ಅಭಿನಯ ಮತ್ತು ಗಂಭೀರ ಮಾತುಗಾರಿಕೆಗಳಿಂದ ಶ್ರೀರಾಮನ ವನವಾಸದ ಹಿನ್ನೆಲೆ , ನಂದಿ ಗ್ರಾಮದಲ್ಲಿ ಭರತಾಗಮನ, ಕರ್ತವ್ಯ ಪರಿಪಾಲನೆಗೆ ಒತ್ತನ್ನು ಅರ್ಥಗರ್ಭಿತವಾಗಿ ನುಡಿದರು. ಹೊಯ್ಯೋಹೋ… ಎಂದು ಬೊಬ್ಬಿಡುತ್ತ ಸುಗ್ರೀವ (ರಘುವೀರ) ಹಾಗೂ ಕಪಿ ಸೈನ್ಯದ ಪ್ರವೇಶ ಅದ್ದೂರಿಯಾಗಿತ್ತು. ಅದರಲ್ಲೂ ಹನುಮಂತ (ವಿಂಧ್ಯಾ ಆಚಾರ್ಯ ) ಪರದೆಯ ಹಿಂದೆ ಮತ್ತು ಮುಂದೆ ಕುಣಿತದಲ್ಲಿ ದಶಾವತಾರದ ನಾಟ್ಯ, ವಿಧವಿಧದ ಕುಣಿತ, ಕಣ್ಣು ಗಳ ಚಲನೆ , ಕರ ವಿನ್ಯಾಸ ಅಭಿನಯವನ್ನು ಸಭಿಕರು ಸ್ವಾಗತಿಸಿದರು.

Advertisement

ಜಾಂಬವಂತ ರಾಮ ಲಕ್ಷ್ಮಣರೊಂದಿಗೆ ಸಂವಾದ ಹನುಮಂತನನ್ನು ಮುದ್ರೆಯುಂಗುರದೊಂದಿಗೆ ಸೀತಾನ್ವೇಷಣೆಗೆ ಕಳುಹಿಸುವುದೆಂದು ನಿರ್ಧಾರವಾಯಿತು. ಹನುಮಂತನು 900 ಯೋಜನ ಹಾರಿ ತೃಣಬಿಂದು ( ವಾದಿರಾಜ) ಆಶ್ರಮದಲ್ಲಿ ಲಂಕೆಗೆ ಹೋಗುವ ದಾರಿಯನ್ನು ತಿಳಿದು ನೆಲಕ್ಕಂಟಿದ ಗಡ್ಡದಿಂದ ಮುಕ್ತಗೊಳಿಸಿ ಆಶ್ರಮದಿಂದ ಹಿಂದಕ್ಕೆ ಹಾರಿದನು. ಲಂಕೆಯನ್ನು ಪ್ರವೇಶಿಸಿದಾಗ ಕಾವಲುಗಾರಳಾದ ಲಂಕಿಣಿಯು ಅಡ್ಡ ತಡೆದಳು. ಲಂಕಿಣಿಯ (ಪ್ರಮೋದ ತಂತ್ರಿ) ಪ್ರವೇಶವು ಭರ್ಜರಿಯಾಗಿತ್ತು. ಶ್ರುತವಾದ ಮಾತು, ತಾಳಕ್ಕೆ ತಕ್ಕ ಕುಣಿತ ಗಂಭೀರವಾಗಿತ್ತು. ಮಧ್ಯರಾತ್ರಿ ಕಾಲದಲ್ಲಿ ಮತ್ತು ಕಳ್ಳನಲ್ಲ ಕಾಣೆ ಎಂಬ ಪದ್ಯಗಳಿಗೆ ಲಂಕಿಣಿ, ಹನುಮಂತರ ಸಂವಾದ ಅಮೋಘವಾಗಿತ್ತು. ಶಾಪದಿಂದ ವಿಮುಕ್ತಳಾದ ಲಂಕಿಣಿಯ ಮೋಕ್ಷದೊಂದಿಗೆ ಪ್ರಸಂಗ ಮುಕ್ತಯವಾಯಿತು.

ಕಪಿಸೈನ್ಯದಲ್ಲಿ ಸುಧನ್ವ
ಮುಂಡ್ಕೂರು, ಸುಮನ್ಯ ಮುಂಡ್ಕೂರು ಮತ್ತು ಧೀರಜ್‌ ತಂತ್ರಿಯವರು ಅಭಿನಯಿಸಿದ್ದರು. ಎರಡನೆಯ ಪ್ರಸಂಗದ ಶ್ರೀ ಕೃಷ್ಣ (ನಿರುಪಮಾ ತಂತ್ರಿ) ಒಡ್ಡೋಲಗದಿಂದ ಪ್ರಾರಂಭವಾಯಿತು. ಶಾಸ್ತ್ರೀಯವಾದ ಲಯಬದ್ಧ ಕುಣಿತ, ಶ್ರುತಿಯುಕ್ತ ಮಾತುಗಳಿಂದ ತನ್ನ ಜನ್ಮ , ಕಂಸವಧೆಯ ಹಿನ್ನೆಲೆ, ದ್ವಾರಕೆಯ ನಿರ್ಮಾಣ ಮಾಡಿ ತನ್ನ ಅಣ್ಣ ಬಲರಾಮನನ್ನು ರಾಜನನ್ನಾಗಿಸಿದ ಬಗ್ಗೆ ವಿವರಣೆಯನ್ನು ನೀಡಿದರು. ಹನುಮಂತನಾಗಿ (ನಾಗರಾಜ) ಪ್ರವೇಶದಲ್ಲಿ ಲಂಕೆಯ ಚರಿತ್ರೆ ಮತ್ತು ರಾಮನಾಮದ ಮಹಿಮೆ 64 ತೀರ್ಥ ಕ್ಷೇತ್ರಗಳ ಸಂದರ್ಶನವನ್ನು ಸಂಕೀರ್ತನ ರೂಪದಲ್ಲಿ ನರ್ತಿಸಿದರು. ಬಲರಾಮ (ಡಾ| ಸುನೀಲ್‌ ಮುಂಡ್ಕೂರು) ಒಡ್ಡೋಲಗ ತಾಳಕ್ಕೆ ತಕ್ಕಂತೆ ಕುಣಿತ ಹೆಜ್ಜೆಗಾರಿಕೆ, ಲಯ ಬದ್ಧ ಮಾತು ಆಕರ್ಷಣೆಯಾಗಿತ್ತು. ಅಯೋಧ್ಯೆ , ರಾಮ, ಪರಶುರಾಮ ಮತ್ತು ದ್ವಾರಕಾವತಿಯ ಬಲರಾಮರು ಪ್ರಸಿದ್ಧರು. ಕಿರೀಟ ಹೊತ್ತವರಿಗೆ ಕಿರಿಕಿರಿ ತಪ್ಪದು ಎಂಬ ನುಡಿ ಮಾರ್ಮಿಕವಾಗಿತ್ತು.

ಬಲರಾಮ ಹನುಮಂತರ ಸಂಭಾಷಣೆ ಜೋರಾಗಿತ್ತು ಹಾಗೂ ಯುದ್ಧದಲ್ಲಿ ಬಲರಾಮನ ಗದೆಯನ್ನು ಕಳೆದುಕೊಂಡದ್ದು ಪೇಚಿಗೆ ಕಾರಣವಾಯಿತು. ಕೃಷ್ಣನೊಡನೆ ಈ ವಿಚಾರ ತಿಳಿಸಿದಾಗ ಕೃಷ್ಣನು ತನ್ನ ವಾಹನ ಗರುಡನ ಗರ್ವವನ್ನು ಇಳಿಸಬೇಕೆಂದು, ಹನುಮಂತನನ್ನು ಬಂಧಿಸಿ ತರಬೇಕೆಂದು ಸೂಚಿಸಿದನು. ಗರುಡನು (ಪ್ರಣಮ್ಯ ತಂತ್ರಿ) ಅಬ್ಬರದ ಹಾರಿಕೆಯ ಕುಣಿಕೆಯಿಂದ ಮತ್ತು ಸ್ವತ್ಛವಾದ ಮಾತುಗಳಿಂದ ಹನುಮಂತನೊಡನೆ ಯುದ್ಧವಾಗಿ ಸೋತು ಗರ್ವಭಂಗವಾದದ್ದು ಕೃಷ್ಣನು, ತ್ರೇತಾಯುಗದಲ್ಲಿ ರಾಮನಾಗಿ ದ್ವಾಪರಯುಗದಲ್ಲಿ ಕೃಷ್ಣ ಎಂದು ತಿಳಿಸಿದಾಗ ರಾಮಾವತಾರವನ್ನು ನೋಡಿ ರಾಮಜಪ ಭಜನೆಯೊಂದಿಗೆ ಪ್ರಸಂಗವು ಮುಕ್ತಾಯವಾಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಕಾಶ್‌ ಕಟೀಲು, ಮದ್ದಳೆ ವಾದಕರಾಗಿ ನೆಕ್ಕರೆ ಮೂಲೆ ಗಣೇಶ ಭಟ್‌ ಚೆಂಡೆವಾದನದಲ್ಲಿ ವೇಣು ಮುಂಬಾಡಿ ಸಹಕರಿಸಿದ್ದರು.

Advertisement

ಯಕ್ಷಪ್ರಿಯ

Advertisement

Udayavani is now on Telegram. Click here to join our channel and stay updated with the latest news.

Next