ಮಂಡ್ಯ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರನ್ನು ಬೀಭತ್ಸವಾಗಿ ಕೊಲೆ ಮಾಡಿ ಅರ್ಧ ದೇಹ ಕತ್ತರಿಸಿರುವ ಶವಗಳು ಪತ್ತೆಯಾಗಿರುವ ಘಟನೆ ಪಾಂಡವಪುರ ಟೌನ್ ಪೊಲೀಸ್ ಠಾಣೆ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಾಂಡವಪುರ ತಾಲೂಕಿನ ಬೇಬಿಕೆರೆ ಹಾಗೂ ಕೆ.ಬೆಟ್ಟಹಳ್ಳಿ ಮಾರ್ಗ ಮಧ್ಯೆ ಇರುವ ಬೇಬಿ ಕೆರೆಯ ಬಳಿ 35 ವರ್ಷದ ಮಹಿಳೆಯ ಹೊಟ್ಟೆಯಿಂದ ಕೆಳಭಾಗದ ಶವ ಅರ್ಧ ಕತ್ತರಿಸಿರುವ ರೂಪದಲ್ಲಿ ಸಿಕ್ಕಿದೆ. ಅದೇ ರೀತಿ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದ ಸಿಡಿಎಸ್ ನಾಲೆಯಲ್ಲಿ ತೇಲಿ ಬಂದಿರುವ ಮಹಿಳೆಯ ಅರ್ಧ ಭಾಗದ ದೇಹ ರೈತನ ಜಮೀನಿನಲ್ಲಿ ಸಿಕ್ಕಿದೆ.
ಎರಡು ಪ್ರಕರಣಗಳಲ್ಲಿ ಮಹಿಳೆಯರ ಹೊಟ್ಟೆಯ ಕೆಳಭಾಗದ ದೇಹದ ಕತ್ತರಿಸಿದ ಭಾಗಗಳು ದೊರೆತಿದೆ. ಎರಡೂ ಶವಗಳ ಕಾಲುಗಳನ್ನು ಕಟ್ಟಿ ದೇಹದ ಅರ್ಧಭಾಗವನ್ನು ಕತ್ತರಿಸಿ ಚೀಲದಲ್ಲಿ ಹಾಕಿ ದುಷ್ಕರ್ಮಿಗಳು ನೀರಿಗೆ ಎಸೆದು ಹೋಗಿದ್ದಾರೆ.
ಇನ್ನು ಎರಡು ಕಡೆ ಪ್ರತ್ಯೇಕವಾಗಿ ದೇಹದ ಅರ್ಧಭಾಗ ಪತ್ತೆಯಾಗಿರುವ ಮಾಹಿತಿ ಪಡೆದ ಪಾಂಡವಪುರ ಹಾಗೂ ಅರೆಕೆರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಕಡೆ ಸಿಕ್ಕಿರುವ ಅರ್ಧ ಕತ್ತರಿಸಿದ ಮೃತ ದೇಹಗಳ ಹೊಟ್ಟೆಯಿಂದ ಕೆಳಗಿನ ಭಾಗ ಮಾತ್ರ ಪತ್ತೆಯಾಗಿದೆ. ಉಳಿದ ಭಾಗ ಇನ್ನೂ ಸಿಕ್ಕಿಲ್ಲ. ಸಿಕ್ಕಿರುವ ಎರಡೂ ಶವಗಳ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿದ್ದು, ಬೇರೆಲ್ಲೋ ಕೊಲೆ ಮಾಡಿ ಬಳಿಕ ದೇಹ ಕತ್ತರಿಸಿ ಸಾಕ್ಷ್ಯ ನಾಶಕ್ಕೆ ದುಷ್ಕರ್ಮಿಗಳು ಯತ್ನಿಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ ಈ ಎರಡು ಶವಗಳ ಉಳಿದರ್ಧ ದೇಹದ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು: ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
ವಿಶೇಷ ತಂಡ ರಚನೆ
ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಕತ್ತರಿಸಿದ ದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಎರಡು ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ಅಲ್ಲದೆ, ಪ್ರತ್ಯೇಕ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.