Advertisement

ದ್ವಿಚಕ್ರ ವಾಹನಗಳ ಢಿಕ್ಕಿ : ಓರ್ವನಿಗೆ ಗಂಭೀರ ಗಾಯ

03:09 PM Mar 27, 2017 | Team Udayavani |

ತೆಕ್ಕಟ್ಟೆ : ಇಲ್ಲಿನ ರಾ.ಹೆ. 66 ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಹೋಂಡಾ ಆ್ಯಕ್ಟೀವಾ ಹಾಗೂ ಯಮಹಾ ಎಫ್‌ಝಡ್‌ ಬೈಕ್‌ ಮುಖಾಮುಖೀ ಢಿಕ್ಕಿಯಾಗಿ ಬೈಕಿನ  ಹಿಂಬದಿ ಸವಾರರಾಗಿದ್ದ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡ ಘಟನೆ  ರವಿವಾರ ಸಂಜೆ  ಸಂಭವಿಸಿದೆ.

Advertisement

ಬಾರಕೂರು ರುಕ್ಮಿಣಿ ಶೆಡ್ತಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ. ವಿದ್ಯಾರ್ಥಿಗಳಾದ ಹೇರೂರಿನ ನಿವಾಸಿ ಶ್ರೀಶ (23) ಹಾಗೂ ಹಿಂಬದಿ ಅಸೀನರಾಗಿದ್ದ ಕುಂದಾಪುರದ ನೂಜಾಡಿಯ ದಿವ್ಯಾ (22) ತನ್ನ ಕಾಲೇಜಿನ ಸಹಪಾಠಿಯೊಡನೆ ಯಮಹಾ ಎಫ್‌ಝಡ್‌ ಬೈಕ್‌ನಲ್ಲಿ ಬಾರಕೂರಿನಿಂದ ಕುಂದಾಪುರದೆಡೆಗೆ ಸಾಗುತ್ತಿದ್ದರು.

ಈ ಸಂದರ್ಭದಲ್ಲಿ ಎದುರಿನಿಂದ ಬಂದ ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಟಿ. ರಾಘವೇಂದ್ರ ಹತ್ವಾರ್‌ (67) ಅವರ ಹೋಂಡಾ ಆಕ್ಟೀವಾಕ್ಕೆ ನೇರವಾಗಿ ಢಿಕ್ಕಿ ಹೊಡೆಯಿತು. 

ಘಟನೆಯ ತೀವ್ರತೆಗೆ ಯಮಹಾ ಎಫ್‌ಝಡ್‌ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ದಿವ್ಯಾ ಆಯತಪ್ಪಿ ರಸ್ತೆಗೆ ಉರುಳಿದ ಪರಿಣಾಮವಾಗಿ ಡಿವೈಡರ್‌ಗೆ ತಲೆ ಬಡಿದಿದ್ದು ತೀವ್ರ ಸ್ವರೂಪದ ಗಾಯಗಳಾಗಿವೆ. ಹತ್ವಾರ್‌ ಅವರಿಗೆ ಪರಿಣಾಮವಾಗಿ ಸಣ್ಣ ಪುಟ್ಟ ಗಾಯಗಳಾಗಿವೆ.

ಘಟನೆ ತಿಳಿದ ತತ್‌ಕ್ಷಣವೇ ನೆರೆದಿದ್ದ ಸ್ಥಳೀಯರು ಗಾಯಾಳುಗಳನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಮಹಾ ಎಫ್‌ಝಡ್‌ ದ್ವಿಚಕ್ರ ವಾಹನ ಹಾಗೂ ಹೋಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿವೆ.

Advertisement

ಘಟನೆ ತಿಳಿಯುತ್ತಿದ್ದಂತೆ ಕೋಟ ಪೊಲೀಸ್‌ ಸಿಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಕೋಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಪಾಯಕಾರಿ ಸರ್ಕಲ್‌ : ಸ್ಥಳೀಯರಲ್ಲಿ ಆತಂಕ
ಒಂದು ವಾರದಲ್ಲಿ  ತೆಕ್ಕಟ್ಟೆ ರಾ.ಹೆ. 66ರ ಪ್ರಮುಖ ಭಾಗದಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ಅಪಾಯಕಾರಿ ಸರ್ಕಲ್‌ನಲ್ಲಿ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಸೂಚನ ಫಲಕಗಳಿಲ್ಲ. ಆದ್ದರಿಂದ ಅವಘಡಗಳು ನಿರಂತರವಾಗಿ ಸಂಭವಿಸುತ್ತಿವೆ. ಸುರತ್ಕಲ್‌ ಚತುಷ್ಪಥ ರಸ್ತೆ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದರೂ ತೆರವಾಗದೆ ಉಳಿದಿರುವ ಕಟ್ಟಡ ಹಾಗೂ ತೆಕ್ಕಟ್ಟೆ ಭಾಗದಲ್ಲಿ ಮಾತ್ರ ಸರ್ವೀಸ್‌ ರಸ್ತೆಗಳಿಲ್ಲದಿರುವ ಕಾರಣ ಇಂತಹ ಅವಘಡಗಳಿಗೆ ಕಾರಣವಾಗುತ್ತಿವೆ.ರಸ್ತೆ ಪ್ರಾಧಿಕಾರದವರು ತತ್‌ಕ್ಷಣವೇ ತುರ್ತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next