Advertisement

ಪರಂಪರೆಗೆ ಲೋಪವಾಗದ ಕಾಲಮಿತಿಯ ಎರಡು ಕಲ್ಯಾಣಗಳು

09:54 PM May 09, 2019 | Team Udayavani |

ಎರಡೂ ಪ್ರಸಂಗಗಳಲ್ಲಿ ಪ್ರಧಾನ ಹಾಸ್ಯಗಾರರಾದ ಮಹೇಶ್‌ ಮಣಿಯಾಣಿಯವರ ನಿರ್ವಹಣೆ ಅನುಪಮವಾಗಿತ್ತು. ತೆಂಕುತಿಟ್ಟಿನ ಹಿರಿಯ ಭಾಗವತರಾದ ಪುತ್ತಿಗೆ ರಘರಾಮ ಹೊಳ್ಳರು ತಮ್ಮ ಸಾಥಿಗಳೊಂದಿಗೆ ಪರಂಪರಾಗತ ಶೈಲಿಯ ಸುಶ್ರಾವ್ಯ ಕಂಠ ಮಾಧುರ್ಯದ ಪದದಲ್ಲಿ ರಂಗತಂತ್ರದ ಹಿಡಿತದಲ್ಲಿ ರಂಗವನ್ನು ದುಡಿಸಿಕೊಂಡ ಪರಿ ಅದ್ಭುತ.

Advertisement

ಯಕ್ಷಗಾನವು ಕಾಲಮಿತಿ ವ್ಯವಸ್ಥೆಯಡಿಯಲ್ಲಿ ಪ್ರದರ್ಶನಕ್ಕೆ ಹೊಂದಿ ಕೊಂಡ ಈ ಕಾಲಘಟ್ಟದಲ್ಲಿ ಮೇ 25ರಂದು ಕಟೀಲು ಪದ್ಮನಾಭ ಇವರ ಸೇವೆಯಾಟವಾಗಿ ಕಟೀಲು ಸಿತ್ಲಾ ಮನೆಯಲ್ಲಿ ಜರಗಿದ ಯಕ್ಷಗಾನ ಪ್ರದರ್ಶನದಲ್ಲಿ “ಜಾಂಬವತಿ ಕಲ್ಯಾಣ’ ಹಾಗೂ “ಶ್ರೀನಿವಾಸ ಕಲ್ಯಾಣ’ವೆಂಬ ಎರಡು ಆಖ್ಯಾನಗಳು ಬಹಳ ಉತ್ತಮವಾಗಿ ಪ್ರದರ್ಶನಗೊಂಡವು.

ಪ್ರಥಮ ಪ್ರಸಂಗ “ಜಾಂಬವತಿ ಕಲ್ಯಾಣ’ವು ಪೂರ್ವರಂಗದೊಂದಿಗೆ ಗೋವಿಂದ ಭಟ್ಟರ ಸತ್ರಾಜಿತ ರಾಜನ ಒಡ್ಡೋಲಗದಿಂದ ಆರಂಭಗೊಂಡಿತು. ಪರಂಪರೆಯ ಬಣ್ಣಗಾರಿಕೆಯಲ್ಲಿ ದೊಂದಿಯೊಂದಿಗೆ ಸಭೆಯಿಂದ ಪ್ರವೇಶ. ಗಂಗಾಧರ ಪುತ್ತೂರರ ಸಿಂಹವು ಆಟದ ಉಠಾವಿಗೆ ಕಿಡಿ ಹೊತ್ತಿಸಿತು. ಚುರುಕು ಕುಣಿತದ ಗೌತಮ ಶೆಟ್ಟಿಯವರ ಪ್ರಸೇನ , ಹಾಗೂ ಪರಂಪರಾಗತ ಕಟ್ಟು ಮೀಸೆ ಹಾಗೂ ಮುಖವರ್ಣಿಕೆಯಲ್ಲಿ ಕುಂಬ್ಳೆ ಶ್ರೀಧರ ರಾಯರು ಬಲರಾಮನ ಗತ್ತುಗಾರಿಕೆಯನ್ನು ಕಾಪಾಡಿಕೊಂಡ ಉತ್ತಮ ನಿರ್ವಹಣೆಯಾಗಿತ್ತು. ಇವರಿಗೆ ಜೊತೆ ನೀಡಿದ ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆಯವರ ಕೃಷ್ಣನ ಪಾತ್ರವನ್ನು ಕಟ್ಟಿಕೊಟ್ಟ ಪರಿ ಉತ್ತಮವಾಗಿತ್ತು. ಇದರ ಜೊತೆ ಸಂಪ್ರದಾಯಬದ್ಧ ಆಹಾರ್ಯ, ವೇಷಗಾರಿಕೆ, ಮಾತು ಹಾಗೂ ಕುಣಿತದಲ್ಲಿ ರಂಜಿಸಿದ ಚಿದಂಬರ ಬಾಬು ಕೋಣಂದೂರುರವರ ಜಾಂಬವಂತ ತುಂಬಾ ಉತ್ತಮ ಅಭಿವ್ಯಕ್ತಿಯಾಗಿ ಮೂಡಿಬಂತು. ಇದಕ್ಕೆ ಕಾರಣ ಯಾವುದೇ ರೀತಿಯ ಕೊಸರು ಇಲ್ಲದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಪರಂಪರೆಯ ಶೈಲಿಯ ಭಾಗವತಿಕೆ.

ಪ್ರಸಂಗದುದ್ದಕ್ಕೂ ರಂಗಸ್ಥಳದ ಕಾವು ಉಳಿಸಿಕೊಂಡ ಇವರು ತಮ್ಮ ಭಾಗವತಿಕೆಯಲ್ಲಿ ಸಿಂಹ ಹಾಗೂ ಪ್ರಸೇನರ ನಡುವೆ ಯುದ್ಧದಲ್ಲಿ ಈಗ ಅಪರೂಪ ಆಗುತ್ತಿರುವ ಯುದ್ಧ ನೃತ್ಯಕ್ಕೆ ಅವಕಾಶ ಕೊಟ್ಟು ರಂಜಿಸಿದ್ದು ವಿಶೇಷವಾಗಿತು.

ಎರಡನೆಯ ಪ್ರಸಂಗ “ಶ್ರೀನಿವಾಸ ಕಲ್ಯಾಣ’ ಕಾಲಗತಿಯ ವೇಗವನ್ನು ಪಡೆದುಕೊಂಡು ಈಶ್ವರ ಪ್ರಸಾದರ ಆಕಾಶರಾಯನ ಒಡ್ಡೋಲದಿಂದ ಆರಂಭಗೊಂಡು ಹರಿಶ್ಚಂದ್ರ ಚಾರ್ಮಾಡಿಯವರ ಶ್ವೇತವರಾಹ ಹಾಗೂ ಹರೀಶ ಮಣ್ಣಾಪುರವರ ವೃಷಭಾಸುರ ಪಾತ್ರಗಳು ಬಣ್ಣದ ವೇಷದ ವೈವಿಧ್ಯತೆಯನ್ನು ಉಣಬಡಿಸಿತು. ಇನ್ನು ಧರ್ಮಸ್ಥಳ ಚಂದ್ರಶೇಖರರು ಕಿರಾತ ಶ್ರೀನಿವಾಸ ಪಾತ್ರದ ಮೂಲಕ ತನ್ನ ಚತುರಂಗದ ಅಭಿನಯದಿಂದ ಇಡೀ ಪ್ರಸಂಗವನ್ನು ಕಳೆಗಟ್ಟಿಸಿದರು. ಶ್ರೀನಿವಾಸನಾಗಿ ವಸಂತ ಗೌಡರ ನಿರ್ವಹಣೆಯೂ ಉತ್ತಮವಾಗಿತ್ತು . ಪದ್ಮಾವತಿಯಾಗಿ ಶರತ್‌ ಶೆಟ್ಟಿ ತೀರ್ಥಹಳ್ಳಿಯವರು ರೂಪು ಹಾಗೂ ಚುರುಕು ನಡೆಯ ನರ್ತನದಿಂದ ಗಮನ ಸೆಳೆದರು.

Advertisement

ಪೂರ್ವರಂಗದಿಂದ ಆರಂಭಗೊಂಡು ಎರಡೂ ಪ್ರಸಂಗಗಳಲ್ಲಿ ಮೇಳದ ಪ್ರಧಾನ ಹಾಸ್ಯಗಾರರಾದ ಮಹೇಶ್‌ ಮಣಿಯಾಣಿಯವರ ನಿರ್ವಹಣೆ ಅನುಪಮವಾಗಿತ್ತು. ಈ ಪ್ರಸಂಗದ ಹಿಮ್ಮೇಳದಲ್ಲಿ ತೆಂಕುತಿಟ್ಟಿನ ಹಿರಿಯ ಭಾಗವತರಾದ ಪುತ್ತಿಗೆ ರಘರಾಮ ಹೊಳ್ಳರು ತಮ್ಮ ಸಾಥಿಗಳೊಂದಿಗೆ ಪರಂಪರಾಗತ ಶೈಲಿಯ ಸುಶ್ರಾವ್ಯ ಕಂಠ ಮಾಧುರ್ಯದ ಪದದಲ್ಲಿ ರಂಗ ತಂತ್ರದ ಹಿಡಿತದಲ್ಲಿ ರಂಗವನ್ನು ದುಡಿಸಿಕೊಂಡ ಪರಿ ಅದ್ಭುತ.

ಚಂಡೆ ಮದ್ದಳೆಯಲ್ಲಿ ರಂಜಿಸಿದ ಅಡೂರು ಲಕ್ಷ್ಮೀನಾರಾಯಣ ರಾವ್‌ ಹಾಗೂ ಸರಪಾಡಿ ಚಂದ್ರಶೇಖರರವರು ಇವತ್ತಿನ ದಿನಗಳಲ್ಲಿ ಎಲ್ಲ ಕಡೆ ಕಂಡು ಬರುವ ಅತಿಯಾದ ಮೈಕ್‌ ಬಳಸುವಿಕೆಯನ್ನು ಮಿತಿಗೊಳಿಸಿದ್ದು ಉತ್ತಮ ಬೆಳವಣಿಗೆ ಸತ್ರಾಜಿತನ ಹಾಗೂ ಅಕಾಶರಾಯನ ಪಾತ್ರವು ಕಚ್ಚೆ ಹಾಕಿ ನಾಟಕೀಯ ಕಿರೀಟ ಧರಿಸಿ ನಾಟಕೀಯ ವೇಷವಾಗುವುದರ ಬದಲಿಗೆ ತೆಂಕಿನ ಕೋಲು ಕಿರೀಟ ವೇಷವಾಗಿ ಪ್ರಸ್ತುತಿ ಹೊಂದಿದ್ದರೆ ಇನ್ನೂ ಅಂದ ಹೆಚ್ಚುತ್ತಿತ್ತು .

ಸುರೇಂದ್ರ ಪಣಿಯೂರ್‌

Advertisement

Udayavani is now on Telegram. Click here to join our channel and stay updated with the latest news.

Next