ಕಲಬುರಗಿ: ಮಹಾರಾಷ್ಟ್ರದ ಮುಂಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ರಾಜ್ಯ ಸರ್ಕಾರ ರೈಲಿನ ವ್ಯವಸ್ಥೆ ಮಾಡಿದ್ದು, ಕಲ್ಯಾಣ ಕರ್ನಾಟಕ ಭಾಗದ ವಲಸಿಗರನ್ನು ಕಲಬುರಗಿಗೆ ಸ್ಥಳಾಂತರಿಸಲಾಗುತ್ತಿದೆ. ಸೋಮವಾರ ಮೊದಲ ರೈಲು ಪ್ರಯಾಣಿಸಿದ್ದು, ಮೇ 13ರಂದು ಮತ್ತೂಂದು ರೈಲು ಆಗಮಿಸುವ ನಿರೀಕ್ಷೆ ಇದೆ.
ಲಾಕ್‌ಡೌನ್‌ನಲ್ಲಿ ಸಿಲುಕಿರುವ ವಲಸಿಗರ ಪ್ರವಾಸಕ್ಕೆ ರೈಲ್ವೆ ಇಲಾಖೆ “ಶ್ರಮಿಕ’ ವಿಶೇಷ ರೈಲುಗಳನ್ನು ಆರಂಭಿಸಿದೆ. ಉದ್ಯೋಗ ಅರಿಸಿ ಮುಂಬೈಗೆ ತೆರಳಿದ್ದ ರಾಜ್ಯದವರನ್ನು ಕರೆ ತರಲು ರೈಲಿನ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಸಂಜೆ 4.30ಕ್ಕೆ ರಾಜ್ಯದ 1,230 ಕಾರ್ಮಿಕರನ್ನು ಹೊತ್ತ ರೈಲು ಶ್ರಮಿಕ ರೈಲು ಥಾಣೆ ನಿಲ್ದಾಣದಿಂದ ಹೊರಟು ಕಲಬುರಗಿ ರೈಲು ನಿಲ್ದಾಣಕ್ಕೆ ತಲುಪಿಸಲಿದೆ.
ನಿಲ್ದಾಣದಲ್ಲೇ ತಪಾಸಣೆ: ಕೋವಿಡ್ ಮಹಾಮಾರಿ ಭೀತಿ ಹಿನ್ನೆಲೆಯಲ್ಲಿ ಮುಂಬೈನಿಂದ ಆಗಮಿಸಿದ ಕಾರ್ಮಿಕರನ್ನು ರೈಲ್ವೆ ನಿಲ್ದಾಣದಲ್ಲೇ ಆರೋಗ್ಯ ತಪಾಸಣೆಗೆ ಒಳಪಡಿಸಲು ವ್ಯವಸ್ಥೆ ಮಾಡಲಾಗಿದೆ. ಒಟ್ಟಿಗೆ ಎಲ್ಲ ಪ್ರಯಾಣಿಕರು ರೈಲಿನಿಂದ ಇಳಿದು ಹೊರ ಹೋಗುವಂತಿಲ್ಲ. ತಾವಿದ್ದ ರೈಲಿನ ಬೋಗಿ ಮುಂದೆ ಸರದಿಯಲ್ಲಿ ಇಳಿದು ತಪಾಸಣೆ ಮಾಡಿಕೊಳ್ಳಲು ಕೌಂಟರ್ ತೆರೆಯಲಾಗಿದೆ. ರೈಲಿನಿಂದ ಬಂದಿಳಿದ ಕೂಡಲೇ ಸಾನಿಟೈಜರ್ ಸಿಂಪಡಿಸಿ ಸಾನಿಟೈಸ್ ಮಾಡಿ, ಥರ್ಮಲ್ ಗನ್‌ದಿಂದ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ನಂತರ ರೈಲು ನಿಲ್ದಾಣದಲ್ಲಿ ಒಂದೇ ದ್ವಾರದ ಮೂಲಕ ಹೊರಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ನಿಲ್ದಾಣದಲ್ಲಿನ ವ್ಯವಸ್ಥೆ ಬಗ್ಗೆ ಸೋಮವಾರ ಮಧ್ಯಾಹ್ನ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಜಿಲ್ಲಾಧಿಕಾರಿ ಶರತ್ ಬಿ., ಜಿಪಂ ಸಿಇಒ ಡಾ| ರಾಜಾ ಪಿ., ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ, ಡಿಸಿಪಿ ಕಿಶೋರಬಾಬು ಸೇರಿದಂತೆ ಹಲವು ಅಧಿಕಾರಿಗಳು ಪರಿಶೀಲಿಸಿದರು.
ಕ್ವಾರಂಟೈನ್ ಕಡ್ಡಾಯ: ರೈಲಿನ ಮೂಲಕ ಕಲಬುರಗಿಗೆ ಬಂದಿರುವರ ಹೆಸರು, ವಿವರ ಮತ್ತು ಅವರ ಆಧಾರ ಕಾರ್ಡ್‌ಗಳ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಮಾಹಿತಿ ಸಂಗ್ರಹಿಸಲಾಯಿತು. ರೈಲ್ವೆ ನಿಲ್ವಾಣದಿಂದ ಅವರ ತಾಲೂಕಿಗೆ ತೆರಳಲು ವ್ಯವಸ್ಥೆ ಈಶಾನ್ಯ ಸಾರಿಗೆ ಸಂಸ್ಥೆಯಿಂದ ಬಸ್ ಕಲ್ಪಿಸಲಾಗುತ್ತಿದೆ. ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಿಸಲು ಕ್ರಮ ವಹಿಸಲಾಗಿದೆ. ತವರು ತಾಲೂಕುಗಳಿಗೆ ಕಳುಹಿಸಿದ್ದ ಅಲ್ಲಿ ವಸತಿ ಶಾಲೆ ಮತ್ತು ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾಯಿತು. ಜಿಲ್ಲೆಯ ಚಿಂಚೋಳಿ, ಚಿತ್ತಾಪುರ, ಸೇಡಂ, ಆಳಂದ, ಅಫಜಲಪುರ ಹಾಗೂ ಮೊದಲಾದ ಕಡೆಗಳಲ್ಲಿ ಕ್ವಾರಂಟೈನ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಲಬುರಗಿ ತಾಲೂಕಿನ ಕಾರ್ಮಿಕರನ್ನು ನಗರದ ರಾಜಾಪುರದಲ್ಲಿರುವ ಹಾಸ್ಟೆಲ್‌ದಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ತವರಿಗೆ ಬಂದವರ ವ್ಯವಸ್ಥೆಗಾಗಿ ಪೊಲೀಸರು, ಕಂದಾಯ, ಆರೋಗ್ಯ, ಸಾರಿಗೆ ಸಂಸ್ಥೆ ಮತ್ತು ಪಾಲಿಕೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಅಲ್ಲದೇ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ಕೈಗೊಳ್ಳುತ್ತಿದ್ದಾರೆ.
ಮುಂಬೈನಲ್ಲಿ ಸಿಲುಕಿರುವ ಜನರನ್ನು ತವರಿಗೆ ಕರೆ ತರಲು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ರೈಲಿನ ವೆಚ್ಚವನ್ನು ರಾಜ್ಯ ಸರ್ಕಾರವೇಭರಿಸುತ್ತಿದೆ. ಸೋಮವಾರ ಮೊದಲ ಹಂತದಲ್ಲಿ 1,200 ಕಾರ್ಮಿಕರನ್ನು ಸ್ಥಳಾಂತರ ಮಾಡಲಾಗಿದ್ದು, ಮೇ 13ರಂದು ಮತ್ತೂಂದು ರೈಲು ಆಗಮಿಸುವ ನಿರೀಕ್ಷೆ ಇದೆ. –
ಡಾ| ಉಮೇಶ ಜಾಧವ, ಸಂಸದ
ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ವಲಸಿಗರ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತದೆ. ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತದೆ. “ಸೇವಾ ಸಿಂಧು’ ಸಹಾಯವಾಣಿ ಆ್ಯಪ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೆಸರು ನೋಂದಾಯಿಸಿ ಕೊಳ್ಳದವರನ್ನು ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿ ನೋಂದಾಯಿಸಿಕೊಳ್ಳಲಾಗುವುದು. –
ಶರತ್ ಬಿ., ಜಿಲ್ಲಾಧಿಕಾರಿ