ಉಡುಪಿ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರು ಪ್ರತಿ ತಿಂಗಳು ಪಡಿತರ ಪಡೆಯುವ ಸಂದರ್ಭ ಒಮ್ಮೆ ಬೆರಳಚ್ಚು ನೀಡಿ ಒಟಿಪಿ ಕೊಡುತ್ತಿದ್ದರು. ಸೆಪ್ಟಂಬರ್ ತಿಂಗಳಿಂದ ಎರೆಡೆರೆಡು ಬಾರಿ ಬೆರಳಚ್ಚು ನೀಡಿ, ಎರಡು ಒಟಿಪಿ ನೀಡಬೇಕು.
ಸಾರ್ವಕಜನಿಕ ಪಡಿತ ವ್ಯವಸ್ಥೆಯಲ್ಲಿ ನೀಡುತ್ತಿರುವ ಅಕ್ಕಿ ಸಹಿತ ವಿವಿಧ ಆಹಾರ ಧಾನ್ಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲು ಎಷ್ಟಿದೆ ಮತ್ತು ಎಷ್ಟೆಷ್ಟು ಹಂಚಿಕೆ ಮಾಡಲಾಗುತ್ತಿದೆ ಎಂಬುದನ್ನು ಜನ ಸಾಮಾನ್ಯರಿಗೆ ಸ್ಪಷ್ಟವಾಗಿ ತಿಳಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸೆಪ್ಟಂಬರ್ ತಿಂಗಳ ಪಡಿತರ ವಿತರಣೆ ಪ್ರಕ್ರಿಯೆ ಶುರುವಾಗಲಿದೆ. ಎರೆಡೆರೆಡು ಬಾರಿ ಬೆರಳಚ್ಚು, ಒಟಿಪಿ ನೀಡಬೇಕಿರುವುದರಿಂದ ಸ್ವಲ್ಪ ಕಿರಿಕಿರಿಯೂ ಆಗಬಹುದು. ಸರ್ವರ್ ಸಮಸ್ಯೆ ಎದುರಾದರೆ ವಿಳಂಬವೂ ಆಗಬಹುದು. ಆದರೆ, ಎರಡು ಬಾರಿ ಒಟಿಪಿ, ಬೆರಳಚ್ಚು ಮಾತ್ರ ನೀಡಲೇಬೇಕು.
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಹಾಗೂ ರಾಜ್ಯ ಸರಕಾರ ರಾಷ್ಟ್ರೀಯ ಆಹಾರ ಭದ್ರತೆ ಅಡಿಯಲ್ಲಿ ಪಡಿತರ ವಿತರಣೆ ಮಾಡುತ್ತಿದೆ. ಅಂತ್ಯೋದಯ ಕಾರ್ಡ್‌ದಾರರಿಗೆ ಮತ್ತು ಆದ್ಯತ ಕಾರ್ಡ್(ಬಿಪಿಎಲ್)ದಾರರಿಗೆ ಪಡಿತರ ನೀಡಲಾಗುತ್ತದೆ. ಆಹಾರ ಭದ್ರತ ಕಾಯ್ದೆಯಡಿ ಅಂತ್ಯೋದಯ ಕಾರ್ಡ್‌ಗೆ ಪ್ರತಿ ಕಾರ್ಡ್‌ಗೆ 35 ಕೆ.ಜಿ., ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ನೀಡಲಾಗುತ್ತದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ಸದಸ್ಯರಿಗೆ 5 ಕೆ.ಜಿ. ನೀಡಲಾಗುತ್ತದೆ.
ಅಂತ್ಯೋದಯ ಕಾರ್ಡ್‌ದಾರರಿಗೆ 35 ಕೆ.ಜಿ. ಅಕ್ಕಿಯ ಜತೆಗೆ ಸದಸ್ಯರ ಸಂಖ್ಯೆ ಎಷ್ಟಿದೆ ಎನ್ನುವುದರ ಆಧಾರದಲ್ಲಿ ಹೆಚ್ಚುವರಿ ಅಕ್ಕಿ ಸಿಗುತ್ತದೆ. ಅದರಂತೆ 35ಕೆ.ಜಿ. ಅಕ್ಕಿಯ ಜತೆ 5 ಸದಸ್ಯರಿದ್ದರೆ 30 ಕೆ.ಜಿ. ಹೆಚ್ಚುವರಿಯಾಗಿ ಸಿಗುತ್ತದೆ. ಬಿಪಿಎಲ್ ಕಾರ್ಡ್‌ದಾರರಿಗೆ ಸದಸ್ಯರ ಸಂಖ್ಯೆಯ ಆಧಾರದಲ್ಲಿ ಪ್ರತಿ ಸದಸ್ಯರಿಗೆ 10 ಕೆ.ಜಿ. ಸಿಗುತ್ತದೆ. ಆದರೆ, ಈ ಹಿಂದೆ ಇದೆರಡಕ್ಕೂ ಪ್ರತ್ಯೇಕ ಬೆರಳಚ್ಚು, ಒಟಿಪಿ ನೀಡಬೇಕಾಗಿರಲಿಲ್ಲ. ಇನ್ನು ಮುಂದೆ ಎರಡಕ್ಕೂ ಪ್ರತ್ಯೇಕ ಒಟಿಪಿ ಹಾಗೂ ಬೆರಳಚ್ಚು ನೀಡಬೇಕು. ಆದರೆ ಹಿಂದೆ ಎಷ್ಟು ಅಕ್ಕಿ ಸಿಗುತಿತ್ತೋ ಅಷ್ಟೇ ಅಕ್ಕಿ ಸಿಗಲಿದೆ. ಅಕ್ಕಿ ಅಥವಾ ಆಹಾರ ಧಾನ್ಯದ ಹಂಚಿಕೆಯ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಈ ಸಂಬಧ ಮಾಹಿತಿಗೆ ಸಾರ್ವಜನಿಕರು 1967 ಅಥವಾ 14445ಗೆ ಕರೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.