ಮೂಡಿಗೆರೆ: ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ 5 ಮಂದಿ
ಆರೋಪಿಗಳನ್ನು ಗುರುತಿಸಲಾಗಿದೆ. ಒಬ್ಬನನ್ನು ಬಂಧಿಸಲಾಗಿದೆ. ಉಳಿದ ನಾಲ್ವರನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಎಸ್‌ಪಿ ಅಣ್ಣಾಮಲೈ
ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.4ರಂದು ಸಂತೋಷ್ ಎಂಬಾತ ಧನ್ಯಶ್ರೀ ಜೊತೆ ದೂರವಾಣಿಯಲ್ಲಿ ಮಾತನಾಡಿ, ನೀನು ಮುಸ್ಲಿಂ ಯುವಕೊಂದಿಗೆ ಮಾತನಾಡಿದ್ದೀಯಾ ಎಂದು ಹೇಳಿ ಬೆದರಿಕೆ ಹಾಕಿದ್ದಾನೆ. ಜ.5ರಂದು ಐದು ಮಂದಿ ಯುವಕರು ಧನ್ಯಶ್ರೀ ಮನೆಗೆ ತೆರಳಿ ಎಚ್ಚರಿಕೆ ಕೊಟ್ಟಿದ್ದಾರೆ. ಬಳಿಕ ಧನ್ಯಶ್ರೀ ಮನೆಯಲ್ಲಿ ಊಟ ಮಾಡದೆ ಹಾಗೆ ಕುಳಿತಿದ್ದಾಳೆ. ಜ.6ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದರು.
ಅಂದು ರಾತ್ರಿ 8 ಗಂಟೆ ವೇಳೆಗೆ ಯುವತಿಯ ತಂದೆ ಯಾದವ ಸುವರ್ಣ ಅವರು ಮೊಬೈಲ್ ವಿಚಾರವಾಗಿ ತನ್ನ ಮಗಳು ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುಳ್ಳು ದೂರು ನೀಡಿದ್ದಾರೆ. 7ರಂದು ಸಂಜೆ 4 ಗಂಟೆಗೆ ಯುವತಿಯ ತಾಯಿ ಆತ್ಮಹತ್ಯೆ ಮಾಡಿಕೊಳ್ಳಲು ನೈಜ ಕಾರಣದ ವಿಚಾರ ನೀಡಿ ದೂರು ನೀಡಿದ್ದಾರೆ. ಆ ದೂರನ್ನಾಧರಿಸಿ ಮೊಬೈಲ್‌ಗಳಲ್ಲಿನ ಕರೆ ಹಾಗೂ ವ್ಯಾಟ್ಸಪ್ ಸಂದೇಶಗಳನ್ನು ಪರಿಶೀಲಿಸಿ, ಯುವತಿಗೆ ಕಿರುಕುಳ ನೀಡಿ ಬೆದರಿಸಿ ಆಕೆಯ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಲಾಗಿದೆ. ಅವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿ, ಒಬ್ಬನನ್ನು ಬಂಧಿಸಿ ಉಳಿದವರ ಬಂಧನಕ್ಕಾಗಿ ಎರಡು ಪೊಲೀಸ್ ತಂಡ ರಚಿಸಲಾಗಿದೆ ಎಂದರು.
ಈ ಪ್ರಕರಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ರವಾನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಲ್ಲಿರುವ ವಿಎಚ್‌ಪಿ, ಬಜರಂಗದಳ, ಹಿಂಜಾವೇ, ಶ್ರೀರಾಮಸೇನೆ ಹಾಗೂ ಪಿಎಫ್‌ಐ ಸಂಘಟನೆಗಳ ಮೇಲೂ ಹದ್ದಿನ ಕಣ್ಣಿಡಲಾಗುವುದು. ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.