ದೋಟಿಹಾಳ: ಸಮೀಪದ ಮುದೇನೂರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಶಿಕ್ಷಕರು ಇಲ್ಲದೇ, ಉತ್ತಮ ಶಿಕ್ಷಣ ಸಿಗದೇ ಅತಂತ್ರವಾಗುತ್ತಿದೆ. ಸರಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಬದಲು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿ. ಹಾಗಾದರೆ ಮಾತ್ರ ಗ್ರಾಮೀಣ ಭಾಗದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ.
ಹೌದು, ಮುದೇನೂರು ಗ್ರಾಮದ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಸರಕಾರ ಆದೇಶದ ಪ್ರಕಾರ ಶಾಲೆಗೆ ಒಟ್ಟು 8 ಹುದ್ದೆಗಳು ಮುಂಜುರಾಗಿವೆ. ಇದರಲ್ಲಿ 6 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸದ್ಯ ಇರುವ ಇಬ್ಬರಲ್ಲಿ ಒಬ್ಬರು ದೈಹಿಕ ಶಿಕ್ಷಕರು, ಇನ್ನೊಬ್ಬರು ಇಂಗ್ಲಿಷ್ ಶಿಕ್ಷಕರು. ದೈಹಿಕ ಶಿಕ್ಷಕರು ಮುಖ್ಯಗುರುಗಳಾಗಿ ಕೆಲಸ ಮಾಡುತ್ತಿದ್ದಾರೆ.
ಇಂಗ್ಲಿಷ್ ಶಿಕ್ಷಕರು ಮತ್ತು ಸರಕಾರ ತಾತ್ಕಾಲಿಕವಾಗಿ ನೀಡುವ ಅತಿಥಿ ಶಿಕ್ಷಕರಿಂದ ಈ ಶಾಲೆ ಕುಂಟುತ್ತ ಸಾಗಿದೆ. ಶಿಕ್ಷಕರ ಕೊರತೆಯಿಂದ ಬೆಳಗಿನಿಂದ ಶಾಲಾ ಅವಧಿ ಮುಗಿಯುವವರೆಗೂ ಒಂದೇ ತರಗತಿಯಲ್ಲಿ ಪಾಠ ಮಾಡಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ. ಇನ್ನೂ 8ನೇ ತರಗತಿ ಮಕ್ಕಳಿಗೆ ಪ್ರೌಢಶಾಲಾ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.
ಶಾಲೆಯಲ್ಲಿ ಶಿಕ್ಷಕ ಕೊರತೆ ಇರುವುದು ನಿಜ. ಸದ್ಯ ಶಾಲೆ ಆರಂಭವಾಗುತ್ತಿದೆ. ಈ ವರ್ಷ 200ಕ್ಕೂ ಹೆಚ್ಚು ಮಕ್ಕಳು ಬರಬಹುದು. ಸದ್ಯ ದೈಹಿಕ ಮತ್ತು ಇಂಗ್ಲಿಷ್ ಶಿಕ್ಷಕರು ಮಾತ್ರ ಇದ್ದೇವೆ. ಉಳಿದ ಆರು ಹುದ್ದೆಗಳು ಖಾಲಿ ಇವೆ. ಅತಿಥಿ ಶಿಕ್ಷಕರು ಬರುವವರೆಗೆ ನಾವೇ ಶಾಲೆ ನಡೆಸಿಕೊಂಡು ಹೋಗಬೇಕು.
∙ರೇಣುಕಾ, ಪ್ರಭಾರಿ ಮುಖ್ಯೋಪಾಧ್ಯಾಯರು
ಮುದೇನೂರ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಸದ್ಯದಲ್ಲಿ ಶಾಲೆಗೆ ಅತಿಥಿಕರನ್ನು ಶಿಕ್ಷಕರನ್ನು ನೇಮಕ ಮಾಡುತ್ತೇವೆ. ಕಾಯಂ ಶಿಕ್ಷಕರು ಬರಲು ಶಿಕ್ಷಕರ ವರ್ಗಾವಣೆ ಅಥವಾ ಹೊಸ ಶಿಕ್ಷಕರ ನೇಮಕಾತಿಯಾಗಬೇಕು. –
ಸುರೇಂದ್ರ ಕಾಂಬ್ಳೆ, ಬಿಇಒ
-ಮಲ್ಲಿಕಾರ್ಜುನ ಮೆದಿಕೇರಿ