ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ವಿವಾದ ಬಗೆಹರಿಸುವ ಸಂಬಂಧ 1937ರಲ್ಲಿ ರೂಪಿಸಲಾಗಿದ್ದ 2 ದೇಶಗಳ ರಚನೆ ವಾದಕ್ಕೆ ಹಮಾಸ್ ಉಗ್ರರ ದಾಳಿಯಿಂದಾಗಿ ಬಹುದೊಡ್ಡ ಪೆಟ್ಟು ಬಿದ್ದಂತಾಗಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ದೇಶಗಳ ರಚನೆ ವಾದಕ್ಕೆ ವಿಶ್ವಸಂಸ್ಥೆ ಸೇರಿದಂತೆ ಬಹುತೇಕ ದೇಶಗಳು ಒಪ್ಪಿದ್ದವು. ಈಗ ಹಮಾಸ್ ದಾಳಿಯಿಂದಾಗಿ ಇಸ್ರೇಲ್ ಈ ವಾದ ಒಪ್ಪುವ ಸಾಧ್ಯತೆ ತೀರಾ ಕಡಿಮೆ ಇದೆ.
ಏನಿದು ಎರಡು ದೇಶಗಳ ರಚನೆ?
ಇಸ್ರೇಲ್ ಬಿಕ್ಕಟ್ಟು ಇಂದಿನದ್ದೇನಲ್ಲ. ಇದಕ್ಕೆ ಸುಮಾರು 100 ವರ್ಷಗಳ ಇತಿಹಾಸವೇ ಇದೆ. 1937ರಲ್ಲಿಯೇ ಪೀಲ್ ಕಮಿಷನ್ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎಂಬ 2 ಸ್ವತಂತ್ರ ದೇಶಗಳನ್ನು ರಚಿಸಬೇಕು ಎಂದಿತ್ತು. 1947-49ರ ಇಸ್ರೇಲ್-ಅರಬ್ ದೇಶಗಳ ಯುದ್ಧ ಮತ್ತು 1967ರ 6 ದಿನಗಳ ಯುದ್ಧದ ಬಳಿಕವೂ ಈ ವಾದ ಮತ್ತೆ ಮುಂಚೂಣಿಗೆ ಬಂದಿತ್ತು. ಆದರೆ ಇದುವರೆಗೆ ಜಾರಿಗೆ ಬಂದಿಲ್ಲ. ಈಗಾಗಲೇ ಇಸ್ರೇಲ್ ದೇಶ ರಚನೆಯಾ ಗಿದ್ದು, ಇದಕ್ಕೆ ಅರಬ್ ದೇಶಗ ಳನ್ನು ಹೊರತುಪಡಿಸಿ, ಜಗತ್ತಿನ ಬಹುತೇಕ ದೇಶಗಳು ಮಾನ್ಯತೆ ನೀಡಿವೆ. ಆದರೆ ಪ್ಯಾಲೆಸ್ತೀನ್‌ಗೆ ಈ ಸ್ವತಂತ್ರ ದೇಶದ ಮಾನ್ಯತೆ ಇನ್ನೂ ಸಿಕ್ಕಿಲ್ಲ.
ಎರಡು ದೇಶಗಳ ವಾದಕ್ಕೆ ಯಾರ ಬೆಂಬಲವಿದೆ?
ಸದ್ಯ ಅಮೆರಿಕದ ಜೋ ಬೈಡೆನ್, ಚೀನದ ಕ್ಸಿ ಜಿನ್‌ಪಿಂಗ್ ಮತ್ತು ಸೌದಿ ಅರೇಬಿಯಾ ದೇಶಗಳು ಈ ಎರಡು ದೇಶಗಳ ವಾದಕ್ಕೆ ಮನ್ನಣೆ ನೀಡಿವೆ. ಭಾರತ, ಇಸ್ರೇಲ್ ಪರವಿದ್ದರೂ, ಸ್ವತಂತ್ರ ಪ್ಯಾಲೆಸ್ತೀನ್‌ನ ವಾದಕ್ಕೂ ಮನ್ನಣೆ ನೀಡಿದೆ.
ಈಗ ಹೊಡೆತವೇಕೆ?
ಸದ್ಯ ಪ್ಯಾಲೆಸ್ತೀನ್ ನೆಲದಿಂದ, ಅಂದರೆ ಗಾಜಾ ಪಟ್ಟಿಯಿಂದ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿ, ತೀವ್ರ ಅನಾಹುತವನ್ನೇ ಮಾಡಿದ್ದಾರೆ. ಇಸ್ರೇಲ್‌ನ ಹಲವಾರು ನಾಗರಿಕರನ್ನೂ ಹತ್ಯೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಗಾಜಾ ಪಟ್ಟಿ ಮೇಲೆ ಮನಬಂದಂತೆ ದಾಳಿ ನಡೆಸಿ ಅಪಾರ ಸಾವು ನೋವಿಗೂ ಕಾರಣವಾಗಿದೆ. ಅಲ್ಲದೆ ಇಸ್ರೇಲ್ ಗಾಜಾ ಪಟ್ಟಿಯನ್ನೇ ಇಲ್ಲದಂತೆ ಮಾಡುತ್ತೇವೆ ಎಂದೂ ಹೇಳಿದೆ. ಹೀಗಾಗಿ ಮುಂದೆ ಈ ಎರಡು ದೇಶಗಳ ವಾದಕ್ಕೆ ಮನ್ನಣೆ ಸಿಗುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ.