ಕೋಲ್ಕತ್ತಾ: ತೀವ್ರ ಗಲಭೆಗೆ ಕಾರಣವಾಗಿದ್ದ ಪಶ್ಚಿಮ ಬಂಗಾಳದ ಸಂದೇಶ್ ಖಲಿ ಘಟನೆಯು ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಇಬ್ಬರು ಮಹಿಳೆಯರು ಇದೀಗ ದೂರು ವಾಪಾಸ್ ಪಡೆದಿದ್ದಾರೆ.
ಅಲ್ಲದೆ ರಾಷ್ಟ್ರೀಯ ಮಹಿಳಾ ಆಯೋಗದ ಆದೇಶದ ಮೇರೆಗೆ ಅವರಿಂದ ಖಾಲಿ ಪತ್ರಕ್ಕೆ ಸಹಿ ಹಾಕಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಮಹಿಳೆ, ದೆಹಲಿ ಮಹಿಳಾ ಆಯೋಗದ ಆದೇಶದ ಮೇರೆಗೆ ದೂರಿನ ವಿಷಯವನ್ನೂ ಸಹ ತಿಳಿಯದೆ ತಾನು ಮತ್ತು ತನ್ನ ಅತ್ತೆಯನ್ನು ನಕಲಿ ಅತ್ಯಾಚಾರದ ದೂರುಗಳನ್ನು ದಾಖಲಿಸಲು ಹೇಗೆ ಒತ್ತಾಯಿಸಲಾಯಿತು ಎಂದು ವಿವರಿಸಿದರು.
ಬುಧವಾರ ನ್ಯಾಯಾಧೀಶರ ಎದುರು ಮಹಿಳೆ ಮತ್ತು ಆಕೆಯ ಅತ್ತೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ. “ನಮಗೆ ಯಾವುದೇ ಸುಳ್ಳು ದೂರಿನ ಭಾಗವಾಗಲು ಇಷ್ಟವಿಲ್ಲ. ನಮ್ಮ ನೆರೆಹೊರೆಯ ಯಾರೂ ನಮ್ಮೊಂದಿಗೆ ಮಾತನಾಡುತ್ತಿಲ್ಲ. ನಾವು ದೂರನ್ನು ರದ್ದುಗೊಳಿಸಿ ಎಂದು ಕೇಳಿದಾಗ ನಮ್ಮನ್ನು ಓಡಿಸಲಾಯಿತು ಎಂದು ಮಹಿಳೆ ಹೇಳಿದ್ದಾರೆ.
“ಒಂದು ದಿನ ಇಬ್ಬರು ಮಹಿಳೆಯರು- ಪಿಯಾಲಿ ದಾಸ್ ಮತ್ತು ಮಂಪಿ ದಾಸ್ ನಮ್ಮ ಮನೆಗೆ ಬಂದು ನನ್ನನ್ನು ಮತ್ತು ಅತ್ತೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಪೊಲೀಸ್ ಠಾಣೆಗೆ ಹೋದ ನಂತರ, ಗೇಟ್ ಒಳಗಿನಿಂದ ಲಾಕ್ ಆಗಿತ್ತು, ನನ್ನ ಅತ್ತೆ 100 ದಿನಗಳ ಉದ್ಯೋಗ ಯೋಜನೆಯ ಭಾಗವಾಗಿ ಇನ್ನೂ ಕೆಲಸ ಬಾಕಿ ಉಳಿದಿದೆ ಎಂದು ಹೇಳಿದರು. ನಂತರ ಆಕೆಗೆ ಬಿಳಿ ಕಾಗದಕ್ಕೆ ಸಹಿ ಹಾಕಿಸಿದರು. ಪ್ರಕರಣಗಳ ಬಗ್ಗೆ ನಮಗೆ ತಿಳಿದಿರಲಿಲ್ಲ” ಎಂದು ಮಹಿಳೆ ಹೇಳಿದರು.
ಸ್ಥಳೀಯ ಟಿಎಂಸಿ ನಾಯಕನಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯರ ಪಟ್ಟಿಯಲ್ಲಿ ತನ್ನ ಮತ್ತು ಅತ್ತೆಯ ಹೆಸರು ಇರುವುದು ಕೆಲವು ದಿನಗಳ ಬಳಿಕ ತಿಳಿಯಿತು. ಆದರೆ ನಮ್ಮ ಜೊತೆಗೆ ಅಂತಹುದೇನು ನಡೆದಿಲ್ಲ. ಇದು ಸುಳ್ಳು ಆರೋಪಗಳು. ನಮಗೆ ಯಾವುದೇ ಸುಳ್ಳು ಪ್ರಕರಣದಲ್ಲಿ ಭಾಗಿಯಾಗಲು ಇಷ್ಟವಿಲ್ಲ” ಎಂದು ಆಕೆ ತಿಳಿಸಿದ್ದಾರೆ.