ಲಕ್ನೋ : ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಆಶ್ರಮ ಮುಖ್ಯಸ್ಥರಾಗಿರುವ ನಾಲ್ವರು ಸ್ವಘೋಷಿತ ದೇವ ಮಾನವ ಮಹಾಂತರು ಹತ್ತು ದಿನಗಳಿಗೂ ಹೆಚ್ಚು ಕಾಲ ಇಬ್ಬರು ಸಾಧ್ವಿಗಳ (ಮಹಿಳಾ ಅನುಯಾಯಿಗಳು) ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಆರೋಪಿಗಳಾಗಿರುವ ನಾಲ್ವರು ಮಹಾಂತರು – ಬೃಜಾನಂದ, ಸಚ್ಚಿದಾನಂದ, ಪರಚೇತಾನಂದ, ವಿಶ್ವಾಸನಂದ ಅವರು ಈಚೆಗೆ ಕೆಲ ಸಮಯದಿಂದ ಸಂತ್ರಸ್ತ ಸಾಧ್ವಿಗಳನ್ನು ಬಲವಂತದ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಆದರೆ ಇದಕ್ಕೆ ಸೊಪ್ಪು ಹಾಕದಿದ್ದ ಇಬ್ಬರು ಸಾಧ್ವಿಗಳನ್ನು ಅನಂತರ ಈ ನಾಲ್ವರು ಮಹಾಂತರು ತಮ್ಮ ಆಶ್ರಮದಲ್ಲಿ ಒತ್ತೆ ಇರಿಸಿಕೊಂಡು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರೆಂದು ಗೊತ್ತಾಗಿದೆ.
ಕಾಮ ಪಿಪಾಸು ಮಹಾಂತರ ಒತ್ತೆಸೆರೆಯಿಂದ ಹೇಗೋ ತಪ್ಪಿಸಿಕೊಂಡು ಬಂದ ಈ ಸಾಧ್ವಿಗಳು ಬಸ್ತಿ ಪೊಲೀಸರಲ್ಲಿ ಕೇಸು ದಾಖಲಿಸಿದರು. ಈ ಸಂತ್ರಸ್ತ ಸಾಧ್ವಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬಸ್ತಿ ಎಸ್‌ಪಿ ತಿಳಿಸಿದ್ದಾರೆ.
ದೂರನ್ನು ಆಧರಿಸಿ ಆಶ್ರಮದ ಮೇಲೆ ಪೊಲೀಸರು ದಾಳಿ ನಡೆಸಿದಾಗ ನಾಲ್ಕೂ ಆರೋಪಿ ಮಹಾಂತರು ಪರಾರಿಯಾಗಿದ್ದಾರೆ. ಸಂತ್ರಸ್ತ ಸಾಧ್ವಿಗಳು 2008ರಿಂದಲೂ ಈ ಮಹಾಂತರ ಆಶ್ರಮದಲ್ಲಿ ವಾಸಿಸಿಕೊಂಡಿದ್ದರು.