ರಾಮದುರ್ಗ: ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಯ ಸೂಕ್ತ ಮಾಹಿತಿ ನೀಡದೇ ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಕುರುಬ ಸಮಾಜದ ಒಂದು ಗುಂಪು ವಿರೋಧ ಮಾಡಿದ್ದರಿಂದ ಗುರುವಾರ ತುರನೂರ ಸಮೀಪದ ಹುಬ್ಬಳ್ಳಿ-ಬೆಳಗಾವಿ ರಸ್ತೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿ ಕುರುಬ ಸಮಾಜದವರನ್ನು ಸಮಾಧಾನ ಪಡಿಸಿದರು.
ಹಿಂದಿನ ಶಾಸಕ ಅಶೋಕ ಪಟ್ಟಣ ಅವರು ಹುಬ್ಬಳ್ಳಿ-ಬೆಳಗಾವಿ ಕ್ರಾಸ್‌ನಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪಿಸಲು ಧನಸಹಾಯ ಮಾಡುವುದಾಗಿ ಹೇಳಿದ್ದರು. ಅದೇ ರೀತಿ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿದರೆ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಬಿಜೆಪಿಯ ಮಹಾದೇವಪ್ಪ ಯಾದವಾಡ ಅವರೂ ಭರವಸೆ ನೀಡಿದ್ದರು. ಈಗ ಇಬ್ಬರೂ ಮೂರ್ತಿ ತಯಾರಿಸಿ ತಂದಿದ್ದಾರೆ. ಅದರಲ್ಲಿ ಯಾವ ನಾಯಕರು ತಯಾರಿಸಿದ ಮೂರ್ತಿ ಸ್ಥಾಪನೆ ಮಾಡಬೇಕು ಎಂಬುದೇ ಸಮಸ್ಯೆಯಾಗಿದೆ.
ಗುರುವಾರ ಒಂದು ಗುಂಪು ರಾಯಣ್ಣನ ಮೂರ್ತಿ ಸ್ಥಾಪನೆಗೆ ಮುಂದಾಗುತ್ತಿದ್ದಂತೆ ಇನ್ನೊಂದು ಗುಂಪಿನ ಕೆಲವರು ಆಕ್ಷೇಪ ವ್ಯಕ್ತ ಪಡಿಸಿ ಮಹಾನ್‌ವ್ಯಕ್ತಿ ಮೂರ್ತಿ ಸ್ಥಾಪನೆಯನ್ನು ತರಾತುರಿಯಲ್ಲಿ ಮಾಡುವುದು ಬೇಡ ಎಂದು ವಾದಿಸಿದರು.
ಕಾಂಗ್ರೆಸ್‌ನ ಅಶೋಕ ಪಟ್ಟಣ ಮತ್ತು ಬಿಜೆಪಿಯ ಮಹಾದೇವಪ್ಪ ಯಾದವಾಡ ಇಬ್ಬರಿಂದಲೂ ವಂತಿಗೆ ಪಡೆದು ಉಭಯ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಭರ್ಜರಿ ಕಾರ್ಯಕ್ರಮ ನಡೆಸೋಣ ಎಂದು ಕೆಲವರು ಪಟ್ಟು ಹಿಡಿದರು. ಆಗ ಕೆಲವರ ಮಧ್ಯೆ ಮಾತಿನ ಚಕಮಕಿ ನಡೆದು ಬಿಗುವಿನಿಂದ ವಾತಾವರಣ ಸೃಷ್ಟಿಯಾಯಿತು. ತಕ್ಷಣವೇ ಜಾಗೃತಗೊಂಡ ಪೊಲೀಸರು ಹೆಚ್ಚಿನ ಸಿಬ್ಬಂದಿ ಕರೆಯಿಸಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದರು.
ನಂತರ ಉಭಯ ಗುಂಪಿನ ನಾಯಕರನ್ನು ಕರೆಯಿಸಿ ಮೂರ್ತಿ ಸ್ಥಾಪನೆಗೆ ಪರವಾನಿಗೆ ಪಡೆದ ನಂತರ ಮೂರ್ತಿ ಸ್ಥಾಪನೆಗೆ ಅವಕಾಶ ನೀಡುವುದಾಗಿ ಹೇಳಿ ಕಳುಹಿಸಿದರು.
ಸಮಾಜ ಸಂಘಟನೆಯಲ್ಲಿ ಎಲ್ಲ ಪಕ್ಷಗಳ ಸಹಾಯ ಸಹಕಾರ ಮುಖ್ಯ. ಆದರೆ ನಮ್ಮಲ್ಲಿಯ ಕೆಲವರು ಸಂಘಟನೆಯಲ್ಲಿ ರಾಜಕೀಯ ಬೆರೆಸಲು ಮುಂದಾಗುತ್ತಿರುವುದರಿಂದ ನಮಗೆ ಹಿನ್ನಡೆಯಾಗುತ್ತಿದೆ. ಶೂರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಕದ್ದುಮುಚ್ಚಿ ಪ್ರತಿಷ್ಠಾಪನೆ ಮಾಡುವುದು ಸೂಕ್ತವಲ್ಲ ಎಂದು ಸಮಾಜದ ಮುಖಂಡ ವಿಠಲ ಜಟಗನ್ನವರ ಪ್ರತಿಕ್ರಿಯೆ ವ್ಯಕ್ತ ಪಡಿಸಿದರು.