Advertisement
ಇವರ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 51 ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಗಳಿಂದ ಸುಮಾರು 48 ಲಕ್ಷ ರೂ. ಮೌಲ್ಯದ 10 ಕೆ.ಜಿ. ಚಿನ್ನ, ಬೆಳ್ಳಿ, 60 ಲ್ಯಾಪ್‌ಟಾಪ್, 60 ಎಚ್.ಪಿ.ಕಂಪನಿಯ ಮಾನಿಟರ್, 70 ಡೆಲ್ ಕಂಪನಿಯ ಸಿಪಿಯು ಹಾಗೂ 18 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಮಾರಕಾಸ್ತ್ರಗಳನ್ನು ತೋರಿಸಿ ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಸಂಜಯ್‌ನಗರ ಪೊಲೀಸರು ಬಂಧಿಸಿದ್ದಾರೆ. ಕೊಡಿಗೇಹಳ್ಳಿಯ ಮುಬಾರಕ್ (22), ಅಜಿತ್ (20) ಬಂಧಿತರು. ಇವರಿಂದ 2.20 ಲಕ್ಷ ಮೌಲ್ಯದ 3 ಚಿನ್ನದ ಸರಗಳು, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.
“ಬೆಳ್ಳಿ’ ಕಳ್ಳ: ದೇವಾಲಯದಲ್ಲಿ ಬೆಳ್ಳಿ ಕಳವು ಮಾಡುತ್ತಿದ್ದ ತಮಿಳುನಾಡು ಮೂಲದ ಹರೀಶ್ ಎಂಬಾತನನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಈತನಿಂದ 4.5 ಲಕ್ಷ ಮೌಲ್ಯದ 9.5 ಕೆ.ಜಿ. ಬೆಳ್ಳಿ ಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಮಲ್ಲೇಶ್ವರದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಬೆಳ್ಳಿ ಕೆಳಸದ ಕಂಟ್ರ್ಯಾಕ್ಟ್ ಪಡೆದಿದ್ದ ಗುತ್ತಿಗೆದಾರರೊಬ್ಬರ ಬಳಿ ಕಳೆದ ಮೂರು ತಿಂಗಳಿಂದ ಕೆಲಸ ಮಾಡುತ್ತಿದ್ದ ಹರೀಶ್, ನಿತ್ಯ ಬೆಳ್ಳಿಯ ಪಟ್ಟಿಗಳನ್ನು ಕಳವು ಮಾಡುತ್ತಿದ್ದ.
ಬಳಿಕ ಇದಕ್ಕಿದ್ದಂತೆ ಗುತ್ತಿಗೆದಾರರಿಗೆ ಮಾಹಿತಿ ನೀಡದೆ ಕೆಲಸ ಬಿಟ್ಟು ತಮಿಳುನಾಡಿಗೆ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೇ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಸುರೇಶ್ ಎಂಬಾತನನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದು, ಈತನಿಂದ 3.64 ಲಕ್ಷ ಮೌಲ್ಯದ 130 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಳಾಗಿದೆ.
ಲ್ಯಾಪ್‌ಟಾಪ್ ಕಳ್ಳರ ಸೆರೆ: ಶಾಲೆಗೆ ಅಳವಡಿಸಲು ಕಂಪ್ಯೂಟರ್ ಖರೀದಿ ಮಾಡುತ್ತಿರುವುದಾಗಿ ಹೇಳಿ ಹಳೇ ಲ್ಯಾಪ್‌ಟಾಪ್ ಮತ್ತು ಸಿಪಿಯುಗಳನ್ನು ಮಾರಾಟ ಮಾಡಿ, ಮಾಲೀಕರನ್ನು ವಂಚಿಸಿದ್ದ ಇಬ್ಬರನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಮ್ಮನಹಳ್ಳಿಯ ಸೈಫ್ ಪಾಷಾ (22), ಜೆ.ಜೆ. ನಗರದ ಸೈಯದ್ ಜಾವೇದ್ (28) ನನ್ನು ಬಂಧಿಸಿದ್ದು, ಇವರಿಂದ 14,45,435 ರೂ. ಮೌಲ್ಯದ, ವಿವಿಧ ಕಂಪನಿಯ 60 ಲ್ಯಾಪ್‌ಟಾಪ್‌ಗ್ಳು ಮತ್ತು 60 ಮಾನಿಟರ್‌ಗಳು ಮತ್ತು 70 ಸಿಪಿಯುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಲ್ಲಿನ ಶ್ರೀ ಲಕ್ಷಿ ವೆಂಕಟೇಶ್ವರ ಕಂಪ್ಯೂಟರ್ಸ್ ಶೋ ರೂಂನ ಮಾಲೀಕರಿಗೆ ಶಾಲೆಗೆ ಅಳವಡಿಸಲು ಸುಮಾರು 200 ಮಾನಿಟರ್‌ಗಳು ಮತ್ತು ಸಿಪಿಯುಗಳು ಬೇಕಿದೆ ಎಂದು ನಂಬಿಸಿದ್ದಾರೆ. ನಂತರ ವಾಹನವೊಂದರಲ್ಲಿ ಎಲ್ಲ ಮಾನಿಟರ್‌ಗಳನ್ನು ತುಂಬಿಕೊಂಡು ಮಾಲೀಕರೊಂದಿಗೇ ಹೋಗಿದ್ದರು. ಮಾರ್ಗ ಮಧ್ಯೆ ಹಳೇ ಗೋಡೌನ್‌ವೊಂದಕ್ಕೆ ಕರೆದೊಯ್ದು ತಮ್ಮದೇ ಗೋಡೌನ್ ಎಂದು ನಂಬಿಸಿದ್ದಾರೆ. ನಂತರ ಹಣ ಕೊಡುವುದಾಗಿ ಮತ್ತೂಂದೆಡೆ ಕರೆದೊಯ್ದು ಗಮನ ಬೇರೆಡೆ ಸೆಳೆದು ನಾಪತ್ತೆಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿಚಕ್ರ ಕಳ್ಳರ ಬಂಧನ: ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಬಾಗಲಕುಂಟೆಯ ರಾಹುಲ್ (19), ಅಶೋಕ್ ಕುಮಾರ್ (25) ನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ 3.10 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೂಂದು ಪ್ರಕರಣದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಸಿಂಗಾಪುರದ ಕಾವೇರಿ ಸರ್ಕಲ್ ನಿವಾಸಿ ಲಕ್ಷ್ಮಣ ಎಂಬಾತನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಇವರಿಂದ 7.60 ಲಕ್ಷ ಮೌಲ್ಯದ 15 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಉತ್ತರವಿಭಾಗದ ಡಿಸಿಪಿ ಲಾಬೂರಾಮ್, ಎಸಿಪಿ ಎ.ಆರ್.ಬಡಿಗೇರ್, ರವಿ ಪ್ರಸಾದ್, ಮಂಜುನಾಥ್ ಬಾಬು ಹಾಗೂ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಇದ್ದರು.