ಘಟಪ್ರಭಾ: ಕಾಲು ಜಾರಿ ಘಟಪ್ರಭಾ ಎಡದಂಡೆ ಕಾಲುವೆಗೆ ಬಿದ್ದು ಇಬ್ಬರು ಸಾವನ್ನಪ್ಪಿದ ದುರ್ಘಟನೆ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದ ವ್ಯಾಪ್ತಿಯಲ್ಲಿ ಇಂದು (ಆ.23) ಬೆಳಗ್ಗೆ ನಡೆದಿದೆ.
ಪಾಮಲದಿನ್ನಿ ಗ್ರಾಮದ ನಾಗಪ್ಪಾ ಕಾಡಪ್ಪಾ ಅಂಗಡಿ (38, ಸರ್ಜನ್), ರಾಯಭಾಗ ತಾಲೂಕಿನ ಅಶೋಕ ಶ್ರೀಶೈಲ್ ಡಬ್ಬನವರ (26) ಸಾವನ್ನಪ್ಪಿರುವ ದುರ್ದೈವಿಗಳು.
ಹಾಲಿನ ಡೈರಿಯಲ್ಲಿಯ ಕ್ಯಾನ್ ಗಳನ್ನು ತುಂಬಿಕೊಂಡು ರಾಯಭಾಗ ತಾಲೂಕಿನ ನಿಪನ್ಯಾಳ ಗ್ರಾಮಕ್ಕೆ ಒಯ್ಯುವಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಹಾಲು ಸಾಗಾಟ ವಾಹನದ ಚಾಲಕ ಅಶೋಕ ರೆಡಿಯೇಟರ್ ಗೆ ನೀರು ಹಾಕಬೇಕೆಂದು ನೀರಿಗೆ ಇಳಿದಿದ್ದಾನೆ. ಪಾಚಿ ಕಟ್ಟಿದ್ದರಿಂದ ಕಾಲುಜಾರಿ ಕಾಲುವೆಗೆ ಬಿದ್ದಿದ್ದಾನೆ. ಆತನನ್ನು ಹಿಡಿಯಲು ಹೋಗಿ ಕ್ಲೀನರ್ ನಾಗಪ್ಪಾ ಕೂಡಾ ಕಾಲುವೆಗೆ ಜಾರಿ ಬಿದ್ದಿದ್ದಾನೆ.
ಕ್ಲೀನರ್ ನಾಗಪ್ಪನ ಮೃತದೇಹ ಪತ್ತೆಯಾಗಿದ್ದು, ಚಾಲಕ ಅಶೋಕ್ ಮೃತದೇಹಕ್ಕಾಗಿ ಗ್ರಾಮಸ್ಥರು ಕಾರ್ಯಾಚರಣೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಘಟಪ್ರಭಾ ಪೊಲೀಸ್ ಠಾಣೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.