Advertisement

Bengaluru: ರಸ್ತೆಯಲ್ಲೇ ಜಗಳಕ್ಕಿಳಿದಿದ್ದ ಇಬ್ಬರು ಬಸ್‌ಗೆ ಬಲಿ!

10:21 AM Nov 13, 2024 | Team Udayavani |

ಬೆಂಗಳೂರು: ಯಲಹಂಕ ಮೇಲು ಸೇತುವೆ ಯಲ್ಲಿ ನಡೆದ ಸರಣಿ ಅಪಘಾತದಲ್ಲಿ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದು ಸಿಮೆಂಟ್‌ ಮಿಕ್ಸರ್‌ ಲಾರಿ ಚಾಲಕ ಹಾಗೂ ಇನೋವಾ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

Advertisement

ಬಾದಾಮಿ ಮೂಲದ ಕಾರು ಚಾಲಕ ಜಗದೀಶ್‌ (40) ಮತ್ತು ಲಾರಿ ಚಾಲಕ ಕುಲದೀಪ್‌ ಕುಮಾರ್‌ (42) ಮೃತರು. ಬಿಎಂಟಿಸಿ ಬಸ್‌ ಚಾಲಕ ಪುಟ್ಟಸ್ವಾಮಿಗೂ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.

ಇನೋವಾ ಕಾರಿನ ಮಾಲಿಕರು ದುಬೈ ನಲ್ಲಿದ್ದು, ಸೋಮವಾರ ತಡರಾತ್ರಿ ವಿಮಾನದ ಮೂಲಕ ಬೆಂಗಳೂರಿಗೆ ಬರುತ್ತಿದ್ದರು. ಹೀಗಾಗಿ ಅವರನ್ನು ಮನೆಗೆ ಕರೆ ತರಲು ಜಗ ದೀಶ್‌ ಕಾರಿನಲ್ಲಿ ವಿಮಾನ ನಿಲ್ದಾಣ ಕಡೆ ಹೋಗು ತ್ತಿದ್ದರು. ಅದೇ ಮಾರ್ಗದಲ್ಲಿ ಸಿಮೆಂಟ್‌ ಮಿಕ್ಸರ್‌ ಲಾರಿ ಕೂಡ ದೇವನಹಳ್ಳಿ ಕಡೆ ತೆರಳುತ್ತಿತ್ತು. ತಡರಾತ್ರಿ 11.30ರ ಸುಮಾರಿಗೆ ವೇಗವಾಗಿ ಬಂದ ಲಾರಿ, ಇನೋವಾ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಕಾರಿಗೆ ಹಾನಿಯಾಗಿದೆ. ಅದರಿಂದ ಕಾರು ಮತ್ತು ಲಾರಿ ಚಾಲಕರು ರಸ್ತೆ ಬದಿ ನಿಂತು ಪರಸ್ಪರ ವಾಗ್ವಾದ ನಡೆಸುತ್ತಿದ್ದರು. ಅದೇ ಮಾರ್ಗದಲ್ಲಿ ಆರ್‌. ಆರ್‌.ನಗರ ಟು ಏರ್‌ಪೋರ್ಟ್‌ ಮಾರ್ಗದ ಬಿಎಂಟಿಸಿ ಬಸ್‌ ಚಾಲಕ ಅತಿವೇಗವಾಗಿ ಬಂದು ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಲಾರಿ ಮುಂದೆ ಸಾಗಿದ್ದು, ಆಗ ಇಬ್ಬರು ಚಾಲಕರು ಲಾರಿ ಮತ್ತು ಇನೋವಾ ಕಾರಿನ ಮಧ್ಯೆ ಸಿಲುಕಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.

ಲಾರಿ ಚಾಲಕ ಸ್ಥಳದಲ್ಲೇ ಸಾವು: ಇಬ್ಬರು ಚಾಲಕರೂ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವಾಗಿದ್ದು, ಲಾರಿ ಚಾಲಕ ಕುಲ ದೀಪ್‌ ಕುಮಾರ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನೋವಾ ಕಾರು ಚಾಲಕ ಜಗದೀಶ್‌ರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ತಡರಾತ್ರಿ ಮೃತಪಟ್ಟರು. ಇನ್ನು ಬಿಎಂಟಿಸಿ ಬಸ್‌ ಚಾಲಕ ಪುಟ್ಟಸ್ವಾಮಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಲಾರಿ ಮತ್ತು ಕಾರಿನ ಚಾಲಕರು ನಿರ್ಲಕ್ಷ್ಯದಿಂದ ರಸ್ತೆ ಬದಿ ನಿಲ್ಲಿಸಿಕೊಂಡು ಮಾತಿನ ವಾಗ್ವಾದದಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ಕತ್ತಲು ವಾತಾವರಣ ಇತ್ತು. ಹೀಗಾಗಿ ಸರಣಿ ಅಪಘಾತ ಸಂಭವಿಸಿದೆ. ಬಸ್‌ನಲ್ಲಿ ಒಬ್ಬ ಪ್ರಯಾಣಿಕರು ಮಾತ್ರ ಇದ್ದರು. ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next