ಬೆಂಗಳೂರು: ಓಕಳಿಪುರ ಅಷ್ಟಪಥ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆಯ ಮತ್ತೆರಡು ಪಥಗಳು ಫೆ.28ರ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ.
ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗೆ ನಡೆಯುತ್ತಿರುವ ಎಂಟು ಪಥಗಳ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಅವರು, ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜತೆಗೆ ತಿಂಗಳಾಂತ್ಯಕ್ಕೆ ಎರಡು ಪಥಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ತಾಕೀತು ಮಾಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ 103 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದು, ಕಾಮಗಾರಿ ಪೂರ್ಣಗೊಂಡರೆ ಮಲ್ಲೇಶ್ವರ, ನಗರ ರೈಲ್ವೆ ನಿಲ್ದಾಣ ಹಾಗೂ ರಾಜಾಜಿನಗರದ ಕಡೆಗೆ ಸಂಚರಿಸುವವರಿಗೆ ಅನುಕೂಲವಾಗಲಿದೆ. ಅದರಂತೆ ಈಗಾಗಲೇ ಸಿದ್ಧಗೊಂಡಿರುವ ಎರಡು ಪಥಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಫೆ.28ರೊಳಗೆ ಮತ್ತೆರಡು ಪಥಗಳು ಸಾರ್ವಜನಿಕರಿಗೆ ಮುಕ್ತವಾಗಲಿವೆ ಎಂದರು.
ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾತನಾಡಿ, ತೀವ್ರ ಸಂಚಾರ ದಟ್ಟಣೆ ಇರುವುದರಿಂದ ರಾತ್ರಿ ವೇಳೆಯಷ್ಟೇ ಕಾಮಗಾರಿ ನಡೆಸುತ್ತಿದ್ದು, ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. ರೈಲು ನಿಲ್ದಾಣದಿಂದ ಮಲ್ಲೇಶ್ವರಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಲೂಪ್-1 ಹಾಗೂ ಮಲ್ಲೇಶ್ವರದಿಂದ ರಾಜಾಜಿನಗರಕ್ಕೆ ಸಂಪರ್ಕಿಸುವ ಅಂಡರ್‌ಪಾಸ್ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ.
ಉಳಿದಂತೆ ಮಲ್ಲೇಶ್ವರದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಲೂಪ್-2 ಹಾಗೂ ರೈಲ್ವೆ ಹಳಿ ಕೆಳಭಾಗದಲ್ಲಿ ಎರಡು ಕಾಂಕ್ರಿಟ್ ಎಲಿಮೆಂಟ್ ಅಳವಡಿಕೆ ಕಾರ್ಯ ಬಾಕಿಯಿದ್ದು, ಮೂರ್‍ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್, ಮೇಯರ್ ಆರ್.ಸಂಪತ್‌ರಾಜ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್ ಸೇರಿದಂತೆ ಪ್ರಮುಖರು ಹಾಜರಿದ್ದರು.