ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಜಮಖಂಡಿಯಲ್ಲಿ ರಾಜ್ಯದಲ್ಲಿಯೇ ಅಧಿಕ, 5 ಸೆಂ.ಮೀ.ಮಳೆ ಸುರಿಯಿತು.
ಮಂಗಳವಾರ ರಾತ್ರಿ ಸಿಡಿಲು ಬಡಿದು ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ ಕರೆಪ್ಪ ವಿಠuಲ ಹಿರೇಕುರುಬರ (25) ಹಾಗೂ ಮುದ್ದೇಬಿಹಾಳ ತಾಲೂಕಿನ ಡೊಂಕಮಡು ಗ್ರಾಮದ ರೇಣುಕಾ ಶಿವರಾಜ್ ಕೂಡಲಗಿ (35) ಮೃತಪಟ್ಟಿದ್ದಾರೆ. ಇದೇ ವೇಳೆ, ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸಿರಾಜ್ ಬಾಬುಸಾಬ್ ಮರ್ತೂರ ಎಂಬುವರು ಗಾಯಗೊಂಡು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಡಚಣ ತಾಲೂಕಿನ ಇಂಚಗೇರಿ, ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ 2 ಎಮ್ಮೆ, ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ 7 ಮೇಕೆಗಳು ಮೃತಪಟ್ಟಿವೆ. ಬಿರುಗಾಳಿಗೆ ಹಲವೆಡೆ ಮನೆಗಳ ಮೇಲ್ಛಾವಣಿ ಹಾರಿಹೋಗಿದ್ದರೆ, ಮರಗಳು ನೆಲಕ್ಕುರುಳಿದ್ದು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಲಿಂಗಸೂಗುರು ತಾಲೂಕಿನಲ್ಲಿ 7 ಜಾನುವಾರುಗಳು ಮೃತಪಟ್ಟಿವೆ.
ಕೊಡಗಿನಲ್ಲಿ ಉತ್ತಮ ಮಳೆ: ಕೊಡಗಿನ ವಿವಿಧೆಡೆ ಬುಧವಾರ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದ್ದು, ಕೆಲವು ಕಡೆ ಗಾಳಿಮಳೆಗೆ ಮರಗಳು ರಸ್ತೆಗುರುಳಿವೆ. ಇದರಿಂದಾಗಿ ವಾಹನಗಳ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಮರಗೋಡು ಬಳಿಯ ಕಟ್ಟೆಮಾಡಿನಲ್ಲಿ ಹಸು ಮತ್ತು ಶಿರಂಗಾಲದಲ್ಲಿ 10 ಆಡುಗಳು ಸಿಡಿಲಿಗೆ ಬಲಿಯಾಗಿವೆ. ಇದೇ ವೇಳೆ, ಆಡು ಮೇಯಿಸುತ್ತಿದ್ದ ರಂಗಸ್ವಾಮಿ ಎಂಬುವರು ಸಿಡಿಲಿನ ಆಘಾತಕ್ಕೆ ಅಸ್ವಸ್ಥರಾಗಿದ್ದಾರೆ. ಕುಶಾಲನಗರದ ಪ್ರವಾಸಿತಾಣ ದುಬಾರೆಯಲ್ಲಿ ಮಳೆಗೆ ಮರ ಮುರಿದು ಬಿದ್ದಾಗ, ಅದರ ಕೆಳಗೆ ಆಶ್ರಯ ಪಡೆದಿದ್ದ ಪ್ರವಾಸಿಗರೊಬ್ಬರು ಅಪಾಯದಿಂದ ಪಾರಾಗಿದ್ದಾರೆ. ಕಾವೇರಿ ನದಿ ಪಾತ್ರದ ನಾಪೋಕ್ಲು ಸುತ್ತಮುತ್ತಲ ಗ್ರಾಮೀಣ ಪ್ರದೇಶ ಮತ್ತು ಸಿದ್ದಾಪುರದಲ್ಲಿ ಉತ್ತಮ ಮಳೆಯಾಗಿದೆ.
ಈ ಮಧ್ಯೆ, ದಕ್ಷಿಣ ಒಳನಾಡಿನ ಕೆಲವೆಡೆ, ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.