ಬೆಂಗಳೂರು: ನಗರದಲ್ಲಿ ಮಂಗಳವಾರ ಎರಡು ಸೋಂಕು ಪ್ರಕರಣ ದೃಢಪಟ್ಟಿದ್ದು, ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 276ಕ್ಕೆ ಏರಿಕೆಯಾಗಿದೆ. ಸದ್ಯ 116 ಸಕ್ರಿಯ ಪ್ರಕರಣಗಳಿವೆ. ಮಂಗಳವಾರ ಮಹದೇವಪುರ ವಲಯದಲ್ಲಿ ತಮಿಳುನಾಡು ಪ್ರಯಾಣ ಹಿನ್ನೆಲೆ ಹೊಂದಿದ್ದ 65 ವರ್ಷದ ವೃದ್ಧೆಯಲ್ಲಿ ಸೋಂಕು ಪತ್ತೆಯಾಗಿದೆ. ಮತ್ತೂಂದು ಪ್ರಕರಣದಲ್ಲಿ 33 ವರ್ಷದ ಪುರುಷ ಸೋಂಕಿತ ನಾಗಿದ್ದು, ಸೋಂಕಿನ ಹಿನ್ನೆಲೆ ಪತ್ತೆ ಮಾಡಲಾಗುತ್ತಿದೆ.
ಈ ಇಬ್ಬರು ಸೋಂಕಿತರನ್ನು ನಗರದ ಕೋವಿಡ್ 19 ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕ ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ. ಉಳಿದಂತೆ ಹೊಂಗಸಂದ್ರ ಕಾರ್ಮಿಕನ ಸಂಪರ್ಕದಿಂದ ಸೋಂಕಿತ ರಾಗಿದ್ದ 19 ವರ್ಷದ ಯುವತಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಒಟ್ಟು 150 ಮಂದಿ ಬಿಡು ಗಡೆಯಾಗಿದ್ದು, 116 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಂಟೈನ್ಮೆಂಟ್ ವಾರ್ಡ್‌ಗಳ ಸಂಖ್ಯೆ ಹೆಚ್ಚಳ: ಮಹದೇವಪುರದಲ್ಲಿ ವರ್ತೂರು ಹಾಗೂ ಹಗದೂರು ವಾರ್ಡ್‌ನಲ್ಲಿ ಮಂಗಳವಾರ ತಲಾ ಒಂದು ಕೋವಿಡ್ 19 ಸೋಂಕು ದೃಢಪಟ್ಟಿದ್ದು ಕಂಟೈನ್ಮೆಂಟ್ ವಾರ್ಡ್‌ಗಳ ಸಂಖ್ಯೆ 25ಕ್ಕೆ ಏರಿಕೆಯಾದಂತಾಗಿದೆ. ಈ ವಾರ್ಡ್‌ಗಳಲ್ಲಿನ ಕೋವಿಡ್ 19 ಸೋಂಕಿತರು ಗುಣಮುಖರಾದ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಮುಕ್ತ ಮಾಡಲಾಗಿತ್ತು. ಮಂಗಳವಾರ ಮತ್ತೆ ಈ ವಾರ್ಡ್‌ಗಳಲ್ಲಿ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೂ.22ರವರೆಗೆ ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ಸೇರಿಸಲಾಗಿದೆ. ಕಳೆದ 5 ದಿನಗಳ ಅಂತರ ದಲ್ಲಿ 8 ವಾರ್ಡ್‌ಗಳು ಕಂಟೈ ನ್ಮೆಂಟ್ ವ್ಯಾಪ್ತಿಗೆ ಸೇರಿದಂತಾಗಿದೆ.
ಪೊಲೀಸರಿಗೆ ಸೋಂಕು ಪರೀಕ್ಷೆ: ಚಾಮರಾಜನಗರದಲ್ಲಿನ ಪೇದೆಗೆ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ಪಾದರಾಯನಪುರ ಹಾಗೂ ಟಿಪ್ಪು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಗಜೀವನರಾಮ್‌ನಗರ (ಗೋರಿಪಾಳ್ಯ) ಪೊಲೀಸ್ ಠಾಣೆ 38 ಕಾನ್ಸ್‌ಸ್ಟೇಬಲ್ ಹಾಗೂ 41 ಮಂದಿ ಸ್ಥಳೀಯರನ್ನು ಸಾಮುದಾಯಿಕ ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿದೆ.
ಪಾದರಾಯನಪುರದಲ್ಲಿ ಮೇ 14ರಿಂದ ಸಾಮುದಾಯಿಕ ಕೋವಿಡ್ 19 ಪರೀಕ್ಷೆ ಪ್ರಾರಂಭಿಸಲಾಗಿತ್ತು. ಇದರ ಭಾಗವಾಗಿ ಇಲ್ಲಿಯವರೆಗೆ 798 ಜನರನ್ನು ರ್‍ಯಾಂಡಂ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ ಒಬ್ಬ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಜನ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 39 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.