ಕೋಟ, ರಾಜಸ್ಥಾನ : ಹದಿನಾರರ ಹರೆಯದ ಸೂಜರ್ ಬಂಜಾರಾ ಮತ್ತು ಆತನ 12ರ ಹರೆಯದ ಸಹೋದರಿ ಸಲೋನಿ ಎಂಬ ಅನಾಥ ಮಕ್ಕಳಿಬ್ಬರು ಬಹಳ ಸಮಯದಿಂದ ಬೀಗ ಹಾಕಲ್ಪಟ್ಟಿದ್ದ ಮೃತ ತಂದೆಯ ಮನೆಯನ್ನು ಶೋಧಿಸಿದಾಗ ಪತ್ತೆಯಾದ 96,500 ರೂ. ಮೊತ್ತದ 500 ರೂ. ಮತ್ತು 1,000 ರೂ.ಗಳ ನಿಷೇಧಿತ ನೋಟುಗಳನ್ನು ಬದಲಾಯಿಸಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ರಾಜಸ್ಥಾನದ ಶರವದ ಗ್ರಾಮದಲ್ಲಿನ ತಮ್ಮ ತಂದೆಯ ಮನೆಯನ್ನು ಪೊಲೀಸ್ ಉಪಸ್ಥಿತಿಯಲ್ಲಿ ಶೋಧಿಸಲಾದಾಗ ಅಲ್ಲಿ 96,500 ರೂ.ಗಳ ನಿಷೇಧಿತ ನೋಟುಗಳು ಪತ್ತೆಯಾಗಿದ್ದವು ಎಂದು ಹೇಳಿರುವ ಸೂರಜ್, 2013ರಲ್ಲಿ ತನ್ನ ತಾಯಿಯ ಕೊಲೆಯಾಯಿತು; ತಂದೆ ರಾಜು ಬಂಜಾರಾ ಅದಕ್ಕೆ ಮೊದಲೇ ವಿಧಿವಶರಾಗಿದ್ದರು ಎಂದು ತಿಳಿಸಿದ್ದಾನೆ.
ಸೂರಜ್ ಈ ಮೊತ್ತವನ್ನು ತನ್ನ ಸಹೋದರಿಯ ಹೆಸರಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕೆಂದು ಬಯಸಿದ್ದಾನೆ.
“ತಾಯಿಯ ಸಾವಿನ ಬಳಿಕ ಈ ಅನಾಥ ಮಕ್ಕಳು ಆಸರೆ ಕೇಂದ್ರವೊಂದರಲ್ಲಿ ವಾಸವಾಗಿದ್ದಾರೆ. ಈ ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದಾಗ ಅವರು ತಮಗೆ ಆರ್ ಕೆ ಪುರಂ ನಲ್ಲಿ ಹಾಗೂ ಶರವದ ಗ್ರಾಮದಲ್ಲಿ ಮನೆ ಇದೆ ಎಂಬುದಾಗಿ ಹೇಳಿದ್ದರು’ ಎಂದು ರಾಜಸ್ಥಾನದ ಕೋಟದಲ್ಲಿನ ಶಿಶು ಕಲ್ಯಾಣ ಸಮಿತಿಯ ಅಧ್ಯಕ್ಷ ಹರೀಶ್ ಗುರುಬಕ್ಸಾನಿ ತಿಳಿಸಿದ್ದಾರೆ.
ಈ ನಡುವೆ ಕೋಟ ಸಂಸದ ಓಂ ಬಿರ್ಲಾ ಅವರು ಈ ಅನಾಥ ಮಕ್ಕಳಿಗೆ ಎಲ್ಲ ರೀತಿಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ.