ತಿರುವನಂತಪುರಂ: ಖಾಸಗಿ ಏಜೆನ್ಸಿಗಳಿಂದ ರಷ್ಯಾದ ಸೈನ್ಯಕ್ಕೆ ನೇಮಕಗೊಂಡ ನಂತರ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಟಕ್ಕಿಳಿದಿರುವ ಕೇರಳ ಮೂಲದ ನಾಲ್ವರು ಯುವಕರಲ್ಲಿ ಇಬ್ಬರು ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಹೇಳಿದ್ದಾರೆ.
ಮಂಗಳವಾರ ಸಂಜೆಯಿಂದ ಭಾರತದ ರಾಯಭಾರ ಕಚೇರಿಯು ರಷ್ಯಾದಿಂದ ಮರಳಲು ಅವರ ಪ್ರಯಾಣದ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ. ಅವರು ಶೀಘ್ರದಲ್ಲೇ ಮನೆಗೆ ಮರಳುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅಟ್ಟಿಂಗಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ ಮುರಳೀಧರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೇರಳದ ಉಳಿದ ಇಬ್ಬರಿನ್ನೂ ಮರಳಿ ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.ಅವರು ಹಿಂತಿರುಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ರಷ್ಯಾದಲ್ಲಿರುವ ಮೂವರ ಸಂಬಂಧಿಕರ ಪ್ರಕಾರ, 2.5 ಲಕ್ಷ ರೂ. ದೊಡ್ಡ ಸಂಬಳದ ಭರವಸೆಯೊಂದಿಗೆ ನೇಮಕಾತಿ ಏಜೆನ್ಸಿಯಿಂದ ರಷ್ಯಾಕ್ಕೆ ಕರೆದೊಯ್ಯಲಾಗಿದೆ. ಲಾಭದಾಯಕ ಉದ್ಯೋಗಗಳ ಭರವಸೆಯೊಂದಿಗೆ ಭಾರತೀಯರನ್ನು ಯುದ್ಧ ಪೀಡಿತ ಉಕ್ರೇನ್‌ಗೆ ಹೋಗಲು ನೇಮಿಸಿದ ಏಜೆನ್ಸಿಗಳ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಮುರಳೀಧರನ್ ಈ ಹಿಂದೆಯೇ ಹೇಳಿದ್ದರು.
ಯುದ್ಧ ಭೂಮಿಯಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಅವರನ್ನು ನೇಮಕ ಮಾಡಿದ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.