ಜಮ್ಮು-ಕಾಶ್ಮೀರ: ಉಗ್ರರ ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ಪೋಷಕರನ್ನು ಕರೆದೊಯ್ದಿದ್ದ ಪರಿಣಾಮ ಇಬ್ಬರು ಉಗ್ರರು ಭಾರತೀಯ ಸೇನೆಗೆ ಶರಣಾಗಿರುವ ಅಪರೂಪದ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಹೊಸದಾಗಿ ಉಗ್ರಗಾಮಿ ಸಂಘಟನೆಗೆ ಸೇರಿದ್ದ ಉಗ್ರರು ಅಡಗಿದ್ದ ತುಜ್ಜಾರ್ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಲು ಸುತ್ತುವರಿದಿದ್ದರು. ಈ ಸಂದರ್ಭದಲ್ಲಿ ಎನ್ ಕೌಂಟರ್ ಸ್ಥಳಕ್ಕೆ ಸೇನೆ ಪೋಷಕರನ್ನು ಕರೆದೊಯ್ದಿದ್ದು ಅವರ ಮನವಿ ಬಳಿಕ ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದರು ಎಂದು ವರದಿ ವಿವರಿಸಿದೆ.
ಶರಣಾದ ಅಲ್ ಬದರ್ ಉಗ್ರರನ್ನು ಅಬಿದ್ ಮತ್ತು ಮೆಹ್ರಾಜ್ ಎಂದು ಗುರುತಿಸಲಾಗಿದೆ. ಬಳಿಕ ಪೋಷಕರನ್ನು ಬಿಗಿದಪ್ಪಿ ಕ್ಷಮಾಪಣೆ ಕೇಳಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ಇದೇ ರೀತಿ ಘಟನೆ ಅಕ್ಟೋಬರ್ 13ರಂದು ಘಟನೆ ನಡೆದಿತ್ತು. ಜಹಾಂಗೀರ್ ಅಹ್ಮದ್ ಬಟ್ ಎಂಬ ಯುವಕ ಚಾದೂರಾ ಪ್ರದೇಶದಿಂದ ನಾಪತ್ತೆಯಾಗಿದ್ದ. ಮಗನ ಪತ್ತೆಗಾಗಿ ಪೋಷಕರು ಹುಡುಕಾಟ ನಡೆಸಿದ್ದರು. ಅಕ್ಟೋಬರ್ 16ರಂದು ಜಂಟಿ ಕಾರ್ಯಾಚರಣೆ ನಡೆಸಿದ್ದ ವೇಳೆ ಜಹಾಂಗೀರ್ ನ ಗುರುತು ಪತ್ತೆ ಹಚ್ಚಲಾಗಿತ್ತು. ನಿಯಮದ ಪ್ರಕಾರ ಭಾರತೀಯ ಸೇನೆ ಶರಣಾಗುವಂತೆ ಮನವೊಲಿಸಿತ್ತು. ನಂತರ ಆತ ಶರಣಾಗಿರುವುದಾಗಿ ವರದಿ ತಿಳಿಸಿದೆ.