ಮುಂಬೈ: ಮಹಾರಾಷ್ಟ್ರದ ಧಾರಾವಿ ಪ್ರದೇಶ ಜಗತ್ತಿನ ಅತೀ ದೊಡ್ಡ ಕೊಳಗೇರಿ ಎಂದೇ ಪ್ರಸಿದ್ದಿಯಾಗಿದ್ದು, ಇದೀಗ ಧಾರಾವಿ ಪ್ರದೇಶದ ಮತ್ತೆ ಇಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದರೊಂದಿಗೆ ಧಾರಾವಿ ಸ್ಲಂ ಪ್ರದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 9ಕ್ಕೆ ಏರಿದಂತಾಗಿದೆ ಎಂದು ಪೌರಾಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
ಕೊಳಗೇರಿ ಪ್ರದೇಶದ ಮುಕುಂದ್ ನಗರದ 25 ವರ್ಷದ ಯುವಕ ಹಾಗೂ ಧಾನ್ವಾಡಾ ಚಾವಲ್ ಪ್ರದೇಶದ 35 ವರ್ಷದ ಯುವಕನಿಗೆ ಕೋವಿಡ್ 19 ವೈರಸ್ ಸೋಂಕಿರುವುದು ದೃಢಪಟ್ಟಿದೆ.
ಇವರ ಸಂಪರ್ಕಕ್ಕೆ ಎಷ್ಟು ಮಂದಿ ಬಂದಿದ್ದಾರೆ ಎಂಬ ಕುರಿತು ಪತ್ತೆ ಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ನಿಯಮದ ಪ್ರಕಾರ ಇಡೀ ಪ್ರದೇಶವನ್ನು ಸೀಲ್ (ಮುಚ್ಚಲಾಗಿದೆ) ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಧಾರಾವಿಯಲ್ಲಿ ಅಂದಾಜು 15 ಲಕ್ಷ ಮಂದಿ ವಾಸಿಸುತ್ತಿದ್ದು, ಈ ಕೊಳಗೇರಿಯಲ್ಲಿ ಪುಟ್ಟ, ಪುಟ್ಟ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಇದು ಇಡೀ ಏಷ್ಯಾದಲ್ಲಿಯೇ ಅತೀ ದೊಡ್ಡ ಕೊಳಗೇರಿ ಪ್ರದೇಶವಾಗಿದೆ. ಇಡೀ ಮುಂಬೈಯಲ್ಲಿಯೇ ಅತೀ ಜನಸಂದಣಿ ಪ್ರದೇಶವಾಗಿದೆ.
ಧಾರಾವಿಯಲ್ಲಿ ಮೊದಲ ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ ಮುಂಬೈ ದಕ್ಷಿಣ ಸೆಂಟ್ರಲ್ ಸಂಸದ ರಾಹುಲ್ ಶೇವಾಲೆ ಅವರು, ಇಡೀ ಧಾರಾವಿ ಪ್ರದೇಶವನ್ನೇ ಲಾಕ್ ಡೌನ್ ಮಾಡುವಂತೆ ಮುಖ್ಯಮಂತ್ರಿ ಉದ್ದವ್ ಠಾಕ್ರೆಗೆ ಮನವಿ ಮಾಡಿಕೊಂಡಿದ್ದರು.