Advertisement

ಐಪಿಎಲ್‌ಗೆ ಇನ್ನೆರಡು ತಂಡಗಳ ಸೇರ್ಪಡೆ: ಇಬ್ಬರು ಉದ್ಯಮಿಗಳ ಆಸಕ್ತಿ

11:58 AM Dec 04, 2020 | keerthan |

ಹೊಸದಿಲ್ಲಿ: ಹೆಚ್ಚು ಕಡಿಮೆ ಒಂದು ವರ್ಷದಿಂದ ಐಪಿಎಲ್‌ ತಂಡಗಳ ಸಂಖ್ಯೆಯನ್ನು 8ರಿಂದ 10ಕ್ಕೆ ಏರಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದೀಗ ಹೊಸ ತಂಡಗಳು ಸೇರ್ಪಡೆಯಾಗುವ ದಿನಗಳು ಹತ್ತಿರವಾಗಿವೆ.

Advertisement

ಡಿ. 24ರಂದು ಬಿಸಿಸಿಐ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಹಮ್ಮಿಕೊಂಡಿದೆ. ಇಲ್ಲಿ 10 ತಂಡಗಳಿಗೆ ಅನುಮೋದನೆ ಪಡೆದು ಕೊಳ್ಳುವುದು ಮುಖ್ಯ ವಿಷಯವಾಗಿದೆ. ಒಟ್ಟು 23 ಅಂಶಗಳು ಸರ್ವಸದಸ್ಯರ ಸಭೆಯಲ್ಲಿ ಚರ್ಚೆಯಾಗಲಿವೆ.

ಐಪಿಎಲ್‌ಗೆ ಹೊಸ ತಂಡಗಳು

ಐಪಿಎಲ್‌ಗೆ ಇನ್ನೆರಡು ತಂಡಗಳನ್ನು ಸೇರಿಸುವ ಬಗ್ಗೆ ಲೆಕ್ಕಾಚಾರ ನಡೆದೇ ಇದೆ. ಗುಜರಾತ್‌ನ ಅಹ್ಮದಾಬಾದ್‌ನಿಂದ ಒಂದು ತಂಡ ಸಿದ್ಧವಾಗುವುದು ಖಚಿತ. ಇನ್ನೊಂದು ತಂಡ ಪುಣೆಯನ್ನು ಪ್ರತಿನಿಧಿಸಬಹುದು. ಸದ್ಯದ ಲೆಕ್ಕಾಚಾರದಲ್ಲಿ ಗೌತಮ್‌ ಅದಾನಿ ಮಾಲಕತ್ವದ ಅದಾನಿ ಸಮೂಹ ಮತ್ತು ಉದ್ಯಮಿ ಸಂಜೀವ್‌ ಗೊಯೆಂಕಾ ಈ ಎರಡು ತಂಡಗಳನ್ನು ಖರೀದಿಸುವ ಪೈಪೋಟಿಯಲ್ಲಿದ್ದಾರೆ.

ಆದರೆ ಈ ತಂಡಗಳು 2021ರಲ್ಲೇ ಆಡುತ್ತವೋ, 2022ರಲ್ಲಿ ಕಣಕ್ಕಿಳಿಯುತ್ತವೋ ಕಾದು ನೋಡಬೇಕು. ಜತೆಗೆ ಮುಂದಿನ ವರ್ಷ ಐಪಿಎಲ್‌ ಬೃಹತ್‌ ಹರಾಜು ನಡೆದೀತೇ ಎಂಬ ಪ್ರಶ್ನೆಯೂ ಇದೆ.

Advertisement

ಇದನ್ನೂ ಓದಿ:ಭಾರತ-ಆಸ್ಟ್ರೇಲಿಯ ಮೊದಲ ಟಿ20: ತಿರುಗೇಟು ನೀಡಲು ಕೊಹ್ಲಿ ಪಡೆಗೊಂದು ಅವಕಾಶ

ಉಪಾಧ್ಯಕ್ಷರ ಆಯ್ಕೆ: ಇದುವರೆಗೆ ಬಿಸಿಸಿಐ ಉಪಾಧ್ಯಕ್ಷ ಸ್ಥಾನ ಖಾಲಿಯೇ ಇದೆ. ಆ ಸ್ಥಾನವನ್ನು ಚುನಾವಣೆ ನಡೆಸಿ ಭರ್ತಿ ಮಾಡಲಾಗುತ್ತದೆ.

ಮೂವರು ಆಯ್ಕೆಗಾರರ ನೇಮಕ: ಬಿಸಿಸಿಐ ಆಯ್ಕೆ ಸಮಿತಿಗೆ ಬಾಕಿ ಉಳಿದ ಮೂವರು ಆಯ್ಕೆ ಗಾರರನ್ನು ಸೇರಿಸಿಕೊಳ್ಳುವುದು, ಹಾಗೆಯೇ ಅವರಿಗಾಗಿ ಮುಖ್ಯಸ್ಥರೊಬ್ಬರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯೂ ನಡೆಯಲಿದೆ.

ಐಸಿಸಿಯಲ್ಲಿ ಜಯ್‌ ಶಾ ಪ್ರತಿನಿಧಿ: ಬಿಸಿಸಿಐಯನ್ನು ಐಸಿಸಿ ಹಾಗೂ ಏಶ್ಯ ಕ್ರಿಕೆಟ್‌ ಕೌನ್ಸಿಲ್‌ನಲ್ಲಿ ಪ್ರತಿನಿಧಿಸುವವರು ಯಾರು ಎಂಬ ಪ್ರಶ್ನೆ ಇದೆ. ಸದ್ಯದ ಪ್ರಕಾರ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈ ಹೊಣೆ ಹೊತ್ತುಕೊಳ್ಳಲಿದ್ದಾರೆ.

ಮುಂದಿನ ವರ್ಷ ಭಾರತದಲ್ಲೇ ನಡೆಯಲಿರುವ ಟಿ20 ವಿಶ್ವಕಪ್‌ ಸಿದ್ಧತೆ, ತೆರಿಗೆ ವಿನಾಯಿತಿ ಪಡೆದುಕೊಳ್ಳುವುದು, 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟ್‌ ಸೇರ್ಪಡೆ ಬಗ್ಗೆಯೂ ಚರ್ಚೆಯಾಗಲಿದೆ

Advertisement

Udayavani is now on Telegram. Click here to join our channel and stay updated with the latest news.

Next