ಬೀದರ: ಗಡಿ ಜಿಲ್ಲೆ ಬೀದರಗೆ ಕಳೆದೊಂದು ವಾರದಿಂದ ಬೆಂಬಿಡದೇ ಕಾಡುತ್ತಿರುವ ಕೋವಿಡ್ ಸೋಂಕಿನ ಅಟ್ಟಹಾಸ ಮುಂದುವರಿದಿದೆ.
ಮಂಗಳವಾರ ನಗರದ ಕಂಟೇನ್ಮೆಂಟ್ ಝೋನ್ (ಸೋಂಕು ಪೀಡಿತ ಪ್ರದೇಶ) ಸಂಪರ್ಕಕ್ಕೆ ಬಂದಿರುವ ಇಬ್ಬರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ದೆಹಲಿಯ ತಬ್ಲಿಘಿಗಳ ಸಂಪರ್ಕದಿಂದ ಜಿಲ್ಲೆಗೆ ಕಾಲಿಟ್ಟ ಕೋವಿಡ್ ಕ್ರಮೇಣ ತನ್ನ ರಣಕೇಕೆ ಮುಂದುವರಿಸಿದ್ದು, ನಂತರ ಸೋಂಕಿತರ ಸಂಪರ್ಕಕ್ಕೆ ಒಳಗಾದವರಲ್ಲಿ ಪಾಸಿಟಿವ್ ಕಾಣಿಸುತ್ತ ಬಂದಿದೆ.
ಶೇ.80ರಷ್ಟು ಸೋಂಕಿತರು ನಗರದ ಓಲ್ಡ್ ಸಿಟಿಯ ಕಂಟೇನ್ಮೆಂಟ್ ಝೋನ್ ಗೆ ಸೇರಿದವರು. ಈಗ ಮಂಗಳವಾರ ಮತ್ತೆ ಪತ್ತೆಯಾಗಿರುವ ಹೊಸ ಪಾಸಿಟಿವ್ ಕೇಸ್‌ಗಳು ಸಹ ಇದೇ ಝೋನ್‌ನ ನಿವಾಸಿಗಳಾಗಿದ್ದು, ಯಾರದೇ ಯಾವುದೇ ಸೋಂಕಿತರೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಆದರೆ, ಕಂಟೇನ್ಮೆಂಟ್ ಝೋನ್ ಸಂಪರ್ಕ ಹೊಂದಿರುವುದಕ್ಕೆ ವೈರಸ್ ತಗುಲಿರುವ ಬಗ್ಗೆ ಆರೋಗ್ಯ ಇಲಾಖೆ ದೃಢಪಡಿಸಿದೆ. ಈಗ ಪತ್ತೆಯಾಗಿರುವ 2 ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
23 ವರ್ಷದ 891 ಸಂಖ್ಯೆಯ ರೋಗಿ ಮತ್ತು 30 ವರ್ಷದ 892 ಸಂಖ್ಯೆಯ ರೋಗಿಯಲ್ಲಿ ಕೋವಿಡ್ ಸೋಂಕು ಇರುವುದು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ದೃಢಪಡಿಸಿದೆ. ಇಬ್ಬರು ಸಹೋದರರಾಗಿದ್ದು, ಹೈದ್ರಾಬಾದ್‌ನಲ್ಲಿ ವಾಹನಗಳ ಮೆಕ್ಯಾನಿಕ್ ಆಗಿದ್ದು, ತೆಲಂಗಾಣದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ತವರಿಗೆ ಮರಳಿದ್ದರು. ಈಗ ಅವರಿಗೆ ವೈರಸ್ ತಗುಲಿದೆ.
ಕೋವಿಡ್ ಹಾದಿ: ಜಿಲ್ಲೆಯಲ್ಲಿ ಏ.2ಕ್ಕೆ ಒಂದೇ ದಿನ 10 ಜನರಲ್ಲಿ ಸೋಂಕು ಕಾಣಿಸಿಕೊಂಡು ಗಮನ ಸೆಳೆದಿತ್ತು. ನಂತರ ಏ.11ಕ್ಕೆ ಒಂದು, ಏ.13ಕ್ಕೆ ಎರಡು, ಏ.17ಕ್ಕೆ ಒಂದು, ಏ.20ಕ್ಕೆ ಒಂದು, ಮೇ 2ಕ್ಕೆ ವೃದ್ಧನ ಸಾವು, ಮೇ 4ಕ್ಕೆ ಏಳು, ಮೇ 9ಕ್ಕೆ ಮೂರು ಮತ್ತು ಮೇ 11ಕ್ಕೆ ಎರಡು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಈಗ ಏ.12ಕ್ಕೆ ಮತ್ತೆ ಎರಡು ಕೇಸ್ ದೃಢವಾಗಿವೆ. ಇನ್ನೂ ಚಿಕಿತ್ಸೆಯಿಂದ ಗುಣಮುಖರಾಗಿ ಒಟ್ಟು 14 ಜನರು ಡಿಸಾcರ್ಜ್ ಆಗಿದ್ದಾರೆ. ಏ.22ಕ್ಕೆ 9, ಮೇ 1ಕ್ಕೆ 2 ಮತ್ತು ಮೇ 7ಕ್ಕೆ ಮೂವರು ಗುಣಮುಖರಾಗಿದ್ದಾರೆ.
ತವರಿಗೆ ಮರಳಿದ ವಿದ್ಯಾರ್ಥಿನಿಯರು: ಬೀದರನಲ್ಲಿ ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದ ಕೇರಳ ಮತ್ತು ಗುಜರಾತ್ ಮೂಲದ ಒಟ್ಟು 105 ವಿದ್ಯಾರ್ಥಿನಿಯರನ್ನು ಮಂಗಳವಾರ ಸಾರಿಗೆ ಬಸ್‌ಗಳ ಮೂಲಕ ಅವರನ್ನು ಕಳುಹಿಸಲಾಯಿತು. ಕೇರಳದ ಕೊಟ್ಟಾಯಂನ 76 ಮತ್ತು ಗುಜರಾತ್‌ನ ನವಸಾರಿಯ 29 ವಿದ್ಯಾರ್ಥಿನಿಯರನ್ನು ಒಟ್ಟು ನಾಲ್ಕು ಬಸ್‌ಗಳಲ್ಲಿ ಕಳುಹಿಸಲಾಯಿತು. ಇದಕ್ಕೂ ಮೊದಲು ನಗರದ ಹಳೆ ಬಸ್ ನಿಲ್ದಾಣದಲ್ಲಿ ಎಲ್ಲ ವಿದ್ಯಾರ್ಥಿಗಳ ಕೋವಿಡ್ ತಪಾಸಣೆ ಮಾಡಲಾಯಿತು.
1921 ಮಂದಿ ವರದಿ ಬಾಕಿ: ಜಿಲ್ಲೆಯಲ್ಲಿ ಇನ್ನೂ 1921 ಜನರ ಗಂಟಲು ದ್ರವ
ಮಾದರಿ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಒಟ್ಟು 6792 ಜನರ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ 4841 ಮಂದಿಯದ್ದು ನೆಗೆಟಿವ್ ಬಂದಿದೆ. ಕೋವಿಡ್ ಶಂಕಿತ 104 ಜನರು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಮಂಗಳವಾರ 60 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತರ ಪ್ರಥಮ ಸಂಪರ್ಕಿತ 776 ಜನರ ಪೈಕಿ 645 ಮಂದಿಯದ್ದು ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಹೆಲ್ತ್ ಬುಲೆಟಿನ್ ತಿಳಿಸಿದೆ.