ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತಿಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಸೋಂಕಿತರ ಸಂಖ್ಯೆ 9 ಕ್ಕೇರಿದೆ. ಈ ಹೊಸ ಸೋಂಕಿತರಿಬ್ಬರೂ 236 ರೋಗಿಯ ಸಂಪರ್ಕಕ್ಕೆ ಬಂದಿದ್ದರು.
ರಾಜ್ಯ ಸರಕಾರ ಗುರುವಾರ ಮಧ್ಯಾಹ್ನ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಖಚಿತ ಪಡಿಸಿದೆ. ಇದೀಗ ಪತ್ತೆಯಾಗಿರುವ ಇಬ್ಬರು ಸೋಂಕಿತರಲ್ಲಿ ಸೋಂಕಿತ ಸಂಖ್ಯೆ430, 30 ವರ್ಷದ ಮಹಿಳೆ ಹಾಗೂ ಸೋಂಕಿತ ಸಂಖ್ಯೆ 431, 13 ವರ್ಷದ ಬಾಲಕಿಯಾಗಿದ್ದಾಳೆ. ಓರ್ವ ಮಹಿಳೆ ಮುಲ್ಲಾ ಓಣಿಯವರಾಗಿದ್ದು, ಬಾಲಕಿ ಕೇಶ್ವಾಪುರದ ಅಜಾದ್ ಕಾಲನಿಯ ನಿವಾಸಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರನ್ನು ನಗರದ ನಿಗಿಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊದಲ ಆರು ಹಾಗೂ ಈಗನ ಒಂದು ಸೋಂಕಿತ ಮುಲ್ಲಾ ಓಣಿ ಹಾಗೂ ಪಕ್ಕದ ಬೀದಿಯ ನಿವಾಸಿಯಾಗಿದ್ದು, ಇದೀಗ ಬಾಲಕಿ ಮಾತ್ರ ಮತ್ತೊಂದು ಪ್ರದೇಶದ ನಿವಾಸಿಯಾಗಿದ್ದಾಳೆ. ಹೀಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸೋಂಕು ಕಾಲಿಟ್ಟಂತಾಗಿದ್ದು, ಮಹಾನಗರ ಜನತೆ ಮತ್ತಷ್ಟು ಆತಂಕಕ್ಕೊಳಗಾಗುವಂತಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ ಒಂಬತ್ತು ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿದ್ದು, ಓರ್ವ ಗುಣಮುಖರಾಗಿ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ. ಎಂಟು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಇಂದು ಹೊಸ 16 ಸೋಂಕು ಪ್ರಕರಣಗಳು ದೃಢವಾಗಿದ್ದು, ಒಟ್ಟು 443 ಸೋಂಕು ಪ್ರಕರಣಗಳಿವೆ. ಅದರಲ್ಲಿ 17 ಜನರು ಮೃತರಾಗಿದ್ದಾರೆ. 141 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮರಳಿದ್ದಾರೆ.