ರಾಮನಗರ: ಜಿಲ್ಲೆಯಲ್ಲಿ ಶನಿವಾರ ಮತ್ತೆರಡು ಕೋವಿಡ್-19 ಪಾಸಿಟಿವ್ ಪ್ರಕರಣಗಳು ಶನಿವಾರ ದೃಢಪಟ್ಟಿವೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೇರಿದೆ. ಈ ಪೈಕಿ ಒಬ್ಬರು ಸೋಂಕಿತರು ಗುಣಮುಖರಾಗಿದ್ದು, ಸದ್ಯ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 16 ಮಾತ್ರ ಇದೆ ಎಂದು ಜಿಲ್ಲಾ ಧಿಕಾರಿ ತಿಳಿಸಿದ್ದಾರೆ. ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಹೊಸದೊಡ್ಡಿ ಗ್ರಾಮದ ಜಿಲ್ಲಾ ಕಾರಾಗೃಹ ಸಿಬ್ಬಂದಿ (30) ಹಾಗೂ ತಮಿಳುನಾಡಿನಿಂದ ಬಂದಿದ್ದ ಯುವಕನಿಗೆ ಸೋಂಕು ದೃಢಪಟ್ಟಿದೆ.
23 ವರ್ಷದ ಯುವಕನೊಬ್ಬನಲ್ಲಿ (ಪಿ.6578) ಸೋಂಕು ಇರುವುದು ಪತ್ತೆಯಾಗಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕಿರುವ ಈತ ಇತ್ತೀಚೆಗೆ ತಮಿಳು ನಾಡಿನಿಂದ ಹಿಂದಿರುಗಿದ್ದ. ಹಾಟ್ ಸ್ಪಾಟ್ ರಾಜ್ಯದಿಂದ ಬಂದ ಹಿನ್ನೆಲೆ ಯಲ್ಲಿ ಆತನನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಈತನ ಗಂಟಲು ದ್ರವ ಪರೀಕ್ಷೆ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಪಾಸಿಟಿವ್ ಆಗಿದ್ದರಿಂದ ನಗರದ ಕೋವಿಡ್ -19 ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಜ್ವರ ತಪಾಸಣೆ ಕೇಂದ್ರದಲ್ಲಿ ಈವರೆಗೆ 2,046 ಮಂದಿ ತಪಾಸಣೆಗೆ ಒಳಗಾಗಿ ದ್ದಾರೆ. 12 ಮಂದಿ ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನಲ್ಲಿ 151 ಮಂದಿಯಿದ್ದಾರೆ. ಶನಿವಾರ ಹೊಸದಾಗಿ 111 ಮಾದರಿಗಳನ್ನು ಸೋಂಕಿನ ಪರೀಕ್ಷೆಗೆ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 5,826 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 12 ಮಾದರಿಗಳು ನೆಗೆಟಿವ್ ಬಂದಿದೆ. ಇದುವರೆಗೆ ಒಟ್ಟು 5,296 ಪರೀಕ್ಷೆ ಫಲಿತಾಂಶಗಳು ನೆಗೆಟಿವ್ ಆಗಿದೆ. ಇನ್ನು ಒಟ್ಟು 514 ಪ್ರಕರಣಗಳ ವರದಿ ಬರಬೇಕಾಗಿದೆ.
ಕಾರಾಗೃಹ ಸಿಬ್ಬಂದಿಗೆ ಸೋಂಕು
ಕನಕಪುರ: ತಾಲೂಕಿನ ಸೋಂಕಿತ ಯುವಕನ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಫಲಿತಾಂಶ ಹೊರಬೀಳುವ ಮೊದಲೇ ಮತ್ತೂಂದು ಸೋಂಕು ದೃಢಪಟ್ಟಿದ್ದು, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಹೊಸದೊಡ್ಡಿ ಗ್ರಾಮದ ಜಿಲ್ಲಾ ಕಾರಾಗೃಹ ಸಿಬ್ಬಂದಿ (30) ಸೋಂಕು ದೃಢಪಟ್ಟಿದ್ದು, ಈತನ ಸಂಪರ್ಕದಲ್ಲಿದ್ದ ಪೋಷಕರನ್ನು ಕ್ವಾರಂಟೈನ್ ಮಾಡಿರುವ ಆರೋಗ್ಯ ಅಧಿಕಾರಿಗಳು, ಮನೆ ಸುತ್ತ ಸೀಲ್‌ಡೌನ್ ಮಾಡಿದ್ದಾರೆ.
ಸೋಂಕಿತ ಜಿಲ್ಲಾ ಕಾರಾಗೃಹದ ಸಹ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿದ್ದ ಈತ ಕಳೆದ 5 ದಿನಗಳಿಂದ ಕ್ವಾರಂಟೈನ್‌ಲ್ಲಿದ್ದರು. ಶುಕ್ರವಾರ ಫಲಿತಾಂಶ ಹೊರಬಿದ್ದಿದ್ದು, ಈತನಿಗೂ ಸೋಂಕು ದೃಢಪಟ್ಟಿದೆ. ಈತ ಕ್ವಾರಂಟೈನ್‌ಗೆ ಒಳಪಡುವ ಮುನ್ನ ತನ್ನ ಸ್ವಗ್ರಾಮ ಹೊಸದೊಡ್ಡಿಗೆ ತೆರಳಿ ತನ್ನ ಪೋಷಕರನ್ನು ಭೇಟಿ ಮಾಡಿದ್ದ. ಹೀಗಾಗಿ ಸೋಂಕಿತನ ತಂದೆ ಮತ್ತು ತಾಯಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿ ಮನೆ ಹತ್ತಿರ ಯಾರೂ ಸುಳಿಯದಂತೆ ಸೀಲ್‌ಡೌನ್ ಮಾಡಲಾಗಿದೆ.
ಸ್ಥಳೀಯ ಉಯ್ಯಂಬಳ್ಳಿ ಗ್ರಾಪಂ ಅಧಿಕಾರಿಗಳು ಮನೆ ಸುತ್ತ ಔಷಧಿ ಸಿಂಪಡಿಸಿ, ಸ್ಯಾನಿಟೈಸ್ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರು ಸೋಂಕಿತನ ಮನೆಯ ಅಕ್ಕ ಪಕ್ಕದ ಕುಟುಂಬಗಳ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಸ್ಥಳದಲ್ಲಿ ಟಿಎಚ್‌ಒ ನಂದಿನಿ, ಪಿಡಿಒ ಮುನಿ ಮಾರೇಗೌಡ, ಆಶಾ ಕಾರ್ಯಕರ್ತೆಯರು ತಪಾಸಣೆ ನಡೆಸಿದ್ದಾರೆ.